Suprabatham
🕉 *ಮಹಾಭಾರತಕಥಾ* ಭೀಷ್ಮಪರ್ವ-4🕉
ಅದನ್ನು ಹೇಳುವುದಕ್ಕೆ ನನಗೆ ಸಂತೊಷವೇ. ಮನಸ್ಸಿನ ಎಲ್ಲ ಇಷ್ಟಾನಿಷ್ಟಗಳನ್ನು ಬಿಟ್ಟು ಬಿಟ್ಟು ಆತನು ತಾನು ಸಂತೊಷದಿಂದಿರುವನು; ಸುಖದಿಂದ ಹಿಗ್ಗನು, ದುಃಖದಿಂದ ಕುಗ್ಗನು, ಆಸೆ, ಭಯ, ಕ್ರೊಧ ಇವುಗಳಿಗೆ ಆತನ ಮನಸ್ಸಿನಲ್ಲಿ ಸ್ಥಾನವೇ ಇಲ್ಲ. ಯಾವುದಕ್ಕೂ, ಯಾರಿಗೂ ಆತನು ಅಂಟಿಕೊಳ್ಳುವುದಿಲ್ಲ. ಒಳಿತುಕೆಡಕುಗಳೆರಡನ್ನೂ ಸಮವಾಗಿಯೇ ಸ್ವೀಕರಿಸುವನು; ಸಂತೋಷಿಸುವೂದೂ ಇಲ್ಲ, ದ್ವೇಷಿಸುವುದೂ ಇಲ್ಲ. ಆಮೆಯು ತನ್ನ ಅಂಗಾಂಗಗಳನ್ನು ಚಿಪ್ಪಿನೊಳಕ್ಕೆ ಎಳೆದುಕೊಳ್ಳುವಂತೆ, ಸ್ಥಿತಿಪ್ರಜ್ಞನು ತನ್ನ ಇಂದ್ರಿಯಗಳನ್ನು ತನ್ನೊಳಕ್ಕೆ ಸೆಳೆದುಕೊಳ್ಳಬಲ್ಲವನು. ಇಂದ್ರಿಯಗಳನ್ನು ಹಿಂತೆಗೆದುಕೊಂಡೊಡನೆ ವಿಷಯಗಳ ಬಗೆಗಿನ ಹಪಹಪಿಸುವಿಕೆ ಹೊರಟುಹೋಗುವುದು. ಅಲ್ಪ ಸ್ವಲ್ಪ ಉಳಿದಿರಬಹುದಾದ ಅವುಗಳ ಮೇಲಣ ರುಚಿಯೂ ಸಹ ಆತ್ಮನ ಸಾಕ್ಷಾತ್ಕಾರವಾದ ಮೇಲೆ ಹೊರಟುಹೋಗುವುದು.
ಇದನ್ನು ಸುಲಭಸಾಧ್ಯವೆಂದುಕೊಳ್ಳಬೇಡ. ಅತ್ಯಂತ ವಿವೇಕಿಯಾದವನಿಗೂ ಸಹ ಕೆಲವೊಮ್ಮೆ ಇಂದ್ರಿಯಗಳು ತಿರುಗಿಬಿದ್ದು, ಅವನ ಮನಸ್ಸು ಬಿರುಗಾಳಿಗೆ ಸಿಕ್ಕಿದ ದೋಣಿಯಂತೆ ಆಗುವುದು. ನನ್ನನ್ನು ಕುರಿತು ಧ್ಯಾನಿಸುವುದರಿಂದ ಇಂದ್ರಿಯನಿಗ್ರಹ ಸಾಧ್ಯ. ಮನಸ್ಸಿನಲ್ಲಿ ವಿಷಯಗಳಿಗೆ ಸ್ಥಾನ ಕೊಟ್ಟುಬಿಟ್ಟರೆ, ಅದು ಸರ್ವನಾಶಕ್ಕೆ ಕಾರಣವಾಗುವುದು. ಏಕೆಂದರೆ, ಮನಸ್ಸಿನಲ್ಲಿ ಕುಳಿತ ವಿಷಯವು ಆಸೆಯನ್ನುಂಟು ಮಾಡುವುದು; ಆಸೆಯಿಂದ ಕ್ರೋಧದ ಉಗಮ; ಕ್ರೋಧಗೊಂಡ ಮನಸ್ಸು ಭ್ರಮೆಗೊಳಗಾಗಿ ಸಾರಾಸಾರ ವಿವೇಚನೆಯನ್ನೇ ಕಳೆದುಕೊಳ್ಳುವುದು; ಮುಂದಿನದು ಸರ್ವನಾಶವಲ್ಲದೆ ಮತ್ತೇನು? ಅದ್ದರಿಂದ ಇಂದ್ರಿಯಗಳನ್ನು ನಿಗ್ರಹಿಸಬೇಕು. ಸಮುದ್ರವನ್ನು ನದಿಗಳು ಹೇಗೊ ಹಾಗೆ ಯಾವನ ಮನಸ್ಸನ್ನು ಆಸೆಗಳು ಪ್ರವೇಶಿಸಿದರೂ, ಏನೂ ಬಾದಲಾಗದೆ ಅಂಥವನು ಶಾಂತಿಯನ್ನೇ ಪಡೆಯುವನು. ಇದೇ ದಿವ್ಯಸ್ಥಿತಿ; ಯಾವುದನ್ನು ಪಡೆದರೆ ಅಲ್ಲಿಂದ ಚ್ಯುತಿಯಲ್ಲವೋ ಆ ಬ್ರಾಹ್ಮೀಸ್ಥಿತಿಯ ಆನಂದವೇ ಇದು" ಎಂದನು.
ಅಲ್ಲಿಯವರೆಗೆ ಅಸಕ್ತಿಯಿಂದ ಕೇಳುತ್ತಿದ್ದ ಅರ್ಜುನನು, ``ಕೃಷ್ಣ, ಆತ್ಮ ಅಥವಾ ಬ್ರಹ್ಮನ ಸಾಕ್ಷಾತ್ಕಾರವೆಂಬುದೇ ಅತ್ಯುನ್ನತ ಸ್ಥಿತಿ ಎನ್ನುವ ನೀನು, ಈ ಯುದ್ಧವೆಂಬ ಘೋರವನ್ನು ಮಾಡೆಂದು ನನಗೇಕೆ ಹೇಳುತ್ತಿರುವೆ" ಎಂದು ಪ್ರಶ್ನಿಸಿದನು.
ಅದಕ್ಕೆ ಕೃಷ್ಣನು, ``ಆ ಸ್ಥಿತಿಯನ್ನು ಬಳಿಸಾರುವುದಕ್ಕೆ ಎರಡು ಮಾರ್ಗಗಳಿವೆ. ಒಂದು ಧ್ಯಾನದಿಂದ ದೊರಕುವ ಜ್ಞಾನ; ಇನ್ನೊಂದು ಕ್ರಿಯಾಶೀಲರಿಗಾಗಿ ಇರುವ ಕರ್ಮ. ನೆನಪಿಡು, ಯಾವನೂ ಕ್ಷಣಮಾತ್ರವಾದರೂ ಏನನ್ನು ಮಾಡದೆ ಸುಮ್ಮನಿರಲಾರ. ಪ್ರತಿಯೊಬ್ಬನೂ ಪ್ರತಿಕ್ಷಣವೂ ಏನಾದರೊಂದು ಮಾಡುತ್ತಿರಬೇಕೆಂಬುದೇ ಪ್ರಕೃತಿಯ ನಿಯಮ. ಏನನ್ನೂ ಮಾಡದೆ ಸುಮ್ಮನೆ ಕುಳಿತಿರುವವನ ಮನಸ್ಸು ಇಂದ್ರಿಯಪ್ರಪಂಚದಲ್ಲಿ ಸುತ್ತಾಡುತಿರುತ್ತದೆ. ಅಂಥವನು ಆಷಾಢಭೂತಿ. ಇನ್ನೊಂದೆಡೆ ನಾನು ಆಗಲೆ ಹೇಳಿದ ಸ್ಥಿತಿಪ್ರಜ್ಞ. ಇಂದ್ರಿಯಗಳನ್ನೂ ಮನಸ್ಸನ್ನೂ ನಿಗ್ರಹಿಸಿಕೊಂಡಿರುವ ಇವನು ಕೆಲಸ ಮಾಡುತ್ತಿದ್ದರೂ ಅದರಿಂದ ಲಿಪ್ತನಾಗುವುದಿಲ್ಲ. ಇವನು ಉಳಿದವರೆಲ್ಲರಿಗಿಂತ ತುಂಬ ಮೇಲಿರುವವನು. ನೀನು ಕರ್ತವ್ಯವನ್ನು ಮಾಡಲೇಬೇಕು. ಕರ್ಮವಿಮುಖನಾಗಿ ನೀನು ಬದುಕಲಾರೆ. ದೇಹವನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳಲು ಸಹ ಮನುಷ್ಯನು ಕೆಲಸ ಮಾಡಬೇಕಾಗುತ್ತದೆ. ಎಂದ ಮೇಲೆ, ಕರ್ಮಬಂಧನವನ್ನು ತಪ್ಪಿಸಿಕೊಳ್ಳುವುದು ಹೇಗೆ ಕರ್ಮವನ್ನು ಒಂದು ಯಜ್ಞಎಂಬಂತೆ ಮಾಡುವ ಮೂಲಕ. ಮಾಡುತ್ತಿರುವ ಕೆಲಸಕ್ಕೆ ಸ್ವಲ್ಪವೂ ಅಂಟಿಕೊಳ್ಳದೆ, ಲೋಕಹಿತಕ್ಕಾಗಿ ಮಾಡುತ್ತಿರುವ ಯಜ್ಞವಿದು ಎಂಬಂತೆ ಕೆಲಸಮಾಡು. ಅದೇ ಒಳ್ಳೆಯದಾಗಿ ಮಾಡಿದ ಕರ್ಮದ ರಹಸ್ಯ. ನಿನ್ನ ಕೆಲಸದಿಂದ ಇತರರಿಗೆ ಅನುಕೂಲವಾಗಬೇಕೇ ಹೊರತು ನಿನಗಲ್ಲ. ಸಮಸ್ತ ಕರ್ಮವನ್ನು ನನಗೆ ಸಮರ್ಪಿಸಿ, ಅನಂತರ ಯುದ್ಧಮಾಡು. ಪರಮಾತ್ಮನಲ್ಲಿ ಮನಸ್ಸನ್ನು ಸ್ಥಿತಗೊಳಿಸು. ಸ್ವಾರ್ಥದಾಸೆಯು ಲವಲೇಶವೂ ಇಲ್ಲದಂತೆ ಮನಸ್ಸನ್ನು ಹಿಂತೆಗೆದುಕೊ. ಹಾಗೆ ನೀನು ಕರ್ತವ್ಯವನ್ನು ನಿರ್ವಹಿಸಿದರೆ, ಅದರ ಪಾಪಪುಣ್ಯಗಳು ನಿನಗೆ ಅಂಟುವುದಿಲ್ಲವಾದ್ದರಿಂದ, ನೀನು ಮುಕ್ತನಾಗಿಯೆ ಉಳಿಯುವೆ" ಎಂದನು.
ಅರ್ಜುನನು, ``ನೀನು ಹೇಳುವುದು ನನಗೆ ಅರ್ಥವಾಗುತ್ತದೆ. ಆದರೆ ಕೃಷ್ಣ, ತನ್ನೆಲ್ಲ ಪ್ರಯತ್ನಗಳನ್ನು ಮೀರಿಯೂ ಮನುಷ್ಯನು ಕೆಲವೊಮ್ಮೆ ಪಾಪದೆಡೆಗೆ ದೂಡಲ್ಪಡುತ್ತಾನೆ. ತನ್ನ ಪ್ರಕೃತಿಗೆ ವಿರೋಧವಾಗಿ, ತನಗಿಷ್ಟವಿಲ್ಲದಿದ್ದರೂ ಅವನು ಪಾಪ ಮಾಡಬೇಕಾಗಿ ಬರುತ್ತದೆ. ಇಂಥದು ಸಂಭವಿಸುವುದಾದರೂ ಹೇಗೆ?" ಎಂದು ಪ್ರಶ್ನೆ ಮಾಡಿದನು.
ಕೃಷ್ಣನು, ``ತಿಳಿಯಿತು ಬಿಡು. ಆಸೆಯೇ ಮನುಷ್ಯನನ್ನು ಪಾಪದೆಡೆಗೆ ಕರೆದೊಯ್ಯುವುದು. ಕ್ರೋಧವೇ ಮನುಷ್ಯನನ್ನು ಪಾಪ ಮಾಡುವಂತೆ ಪ್ರೇರೇಪಿಸುವುದು. ಇವೆರಡನ್ನೂ ಮನುಷ್ಯನ ಶತ್ರುಗಳೆಂದೇ ತಿಳಿ. ಒಳಗೆ ಹುದುಗಿರುವ ನಿಜವಾದ ಜ್ಞಾವನ್ನು ಇವೆರಡೂ ಮುಸುಕಿರುವುವು. ಜ್ವಾಲೆಯನ್ನು ಹೊಗೆಯು ಮುಸುಕಿರುವಂತೆ, ಕನ್ನಡಿಯನ್ನು ಧೂಳು ಮುಸುಕಿರುವಂತೆ, ಇನ್ನೂ ಹುಟ್ಟದಿರುವ ಮಗುವನ್ನು ಗರ್ಭವು ಆವರಿಸಿರುವಂತೆ, ನಿನ್ನೊಳಗಿರುವ ಆತ್ಮನನ್ನು ನೀನು ನೊಡಲಾಗದಿರುವುದು ಇವುಗಳಿಂದಾಗಿಯೇ. ಊದುವುದರಿಂದ ಜ್ವಾಲೆಯ ಹೊಗೆಯನ್ನು ನಿವಾರಿಸುವಂತೆ, ಸಾತ್ತ್ವಿಕನಾದ ಮನುಷ್ಯನಿಗೆ ಸ್ವಲ್ಪ ಪ್ರಯತ್ನದಿಂದಲೇ ತನ್ನಲ್ಲಿರುವ ಭಗವಂತನನ್ನು ನೋಡಲು ಸಾಧ್ಯವಾಗುವುದು. ಬಟ್ಟೆಯಿಂದ ಕನ್ನಡಿಯನ್ನು ಒರೆಸಿ ಸ್ವಚ್ಛಗೊಳಿಸಬೇಕಾಗಿರುವಂತೆ, ರಾಜಸಿಕ ವ್ಯಕ್ತಿಗೆ ಸ್ವಲ್ಪ ಹೆಚ್ಚಿನ ಪ್ರಯತ್ನದಿಂದ ಭಗವತ್ಕಾಕ್ಷಾರವಾಗಬಹುದು. ಮಗುವು ಗರ್ಭಾವರಣವನ್ನು ಬಿಟ್ಟು ಹೊರಗೆ ಬರಲು ತಿಂಗಳುಗಳೇ ಬೇಕಾಗುವಂತೆ, ತಾಮಸಿಕ ವ್ಯಕ್ತಿಗೆ ಇಂದ್ರಿಯಗಳ ಹಿಡಿತದಿಂದ ತಪ್ಪಿಸಿಕೊಂಡು ಬ್ರಹ್ಮಸಾಕ್ಷಾತ್ಕಾರ ಮಾಡಿಕೊಳುವುದಕ್ಕೆ ತುಂಬ ಕಷ್ಟವಾಗುವುದು!" ಎಂದನು.
ಅನಂತರ ಕೃಷ್ಣನು ತನ್ನ ದಿವ್ಯತೆಯ ಕಲ್ಪನೆಯನ್ನು ಅರ್ಜುನನಿಗೆ ಮಾಡಿಕೊಡಬೇಕೆಂದು ನಿರ್ಧರಿಸಿ , ಉದ್ದೇಶಪೂರ್ವಕವಾಗಿ ಹೀಗೆಂದನು: `
No comments:
Post a Comment