Wednesday, 10 August 2016

ಮಹಾಭಾರತಕಥಾ* ಭೀಷ್ಮಪರ್ವ-7

Suprabatham 

🕉 *ಮಹಾಭಾರತಕಥಾ* ಭೀಷ್ಮಪರ್ವ-7🕉
            ಅರ್ಜುನನು, ``ನಿನ್ನನ್ನು ಪೂಜಿಸುವ ಭಕ್ತರೂ ಇದ್ದಾರೆ, ಪರಬ್ರಹ್ಮನ್ನು ಅರಾಧಿಸುವವರೂ ಇದ್ದಾರೆ; ಇವರಲ್ಲಿ ಯಾರನ್ನು ಉತ್ತಮ ಯೋಗಿ ಎನ್ನಬಹುದು?" ಎಂದನು.  
       ಕೃಷ್ಣನು, ``ಅವರಿಬ್ಬರೂ ಸೇರುವುದು ನನ್ನನ್ನೇ. ಕೆಲವರು ತಮ್ಮ ಇಂದ್ರಿಯಗಳನ್ನೆಲ್ಲ ಸ್ಥಗಿತಗೊಳಿಸಿ, ಯಾವಾಗಲೂ ಸಮಸ್ಥಿತಿಯಲ್ಲಿರುತ್ತ, ಸರ್ವಭೂತಗಳಿಗೂ ಹಿತವನ್ನೆ ಮಾಡುತ್ತ ಅವಿನಾಶಿಯಾದ ಪರಬ್ರಹ್ಮನನ್ನು ಧ್ಯಾನಿಸುವರು; ಆ ಮೂಲಕ ನನ್ನ ಬಳಿಗೆ ಬರುವರು. ಯಾರು ಸಂಪೂರ್ಣ ನಂಬಿಕೆಯಿಂದ ನನ್ನ ಮೇಲೇ ಮನಸ್ಸನ್ನು ನಿಲ್ಲಿಸಿ ನನ್ನನ್ನೇ ಪೂಜಿಸುತ್ತಿರುವರೋ ಅವರೇ ಪರಿಪೂರ್ಣ ಯೋಗಿಗಳು ಎಂದು ನಾನು ಪರಿಗಣಿಸುತ್ತೇನೆ. ಪರಬ್ರಹ್ಮ ಆರಾಧನೆ ಬಹು ಕಷ್ಟದ ಹಾದಿ; ಗುರಿ ತಲುಪುವುದೂ ಕಷ್ಟವೇ. ಅದಕ್ಕಿಂತ ಈ ಇನ್ನೊಂದು ಹಾದಿ ಸುಗಮ. ಯಾರು ಸಮಸ್ತ ಕರ್ಮಗಳನ್ನೂ ನನಗೇ ಸಮರ್ಪಿಸಿ, ನನ್ನನ್ನೇ ಅತ್ಯಂತ ಪ್ರೀತಿಯ ಆರಾಧ್ಯವನ್ನಾಗಿ ಮಾಡಿಕೊಂಡು, ಒಂದೇ ಮನಸ್ಸಿನಿಂದ ನನ್ನನ್ನು ಪೂಜಿಸುತ್ತ ನನ್ನನ್ನು ಧ್ಯಾನಿಸುವರೋ, ಅವರನ್ನು ಈ ಸಂಸಾರಸಾಗರದಿಂದ ನಾನೇ ಕೈಹಿಡಿದು ಪಾರುಮಾಡುತ್ತೇನೆ. ನಿನ್ನ ಮನಸ್ಸು, ಚಿಂತನೆಗಳು ಎಲ್ಲವನ್ನೂ ನನ್ನ ಮೇಲೇ ಇರಿಸು; ನಿಸ್ಸಂಶಯವಾಗಿ ನೀನು ನನ್ನನ್ನೇ ಸೇರುತ್ತೀಯೆ" ಎಂದು ಕಿವಿಮಾತು ಹೇಳಿದನು.  
         ಅರ್ಜುನನು, ``ಕೃಷ್ಣ, ಸಂನ್ಯಾಸದ ನಿಜವಾದ ಸ್ವರೂಪವನ್ನು ನಾನು ತಿಳಿಯಬೇಕೆಂದಿರುವೆನು. ದಯವಿಟ್ಟು ಅದರ ಬಗ್ಗೆ ನನಗೆ ಹೇಳು" ಎನ್ನಲು, ಕೃಷ್ಣನು, ``ಆಸೆಯಿಂದ ಉದ್ಯುಕ್ತವಾದ ಕೆಲಸಗಳನ್ನು ಪರಿತ್ಯಜಿಸುವುದೇ ಸಂನ್ಯಾಸವೆಂದು ಋಷಿಗಳು ಹೇಳುವರು. ಕರ್ಮಫಲಗಳನ್ನು ಸಮರ್ಪಿಸುವುದೇ ತ್ಯಾಗವೆನ್ನಿಸಿಕೊಳ್ಳುವುದು. ಕರ್ಮವನ್ನು ಸಂಪೂರ್ಣ ತ್ಯಜಿಸಬೇಕೆಂದು ಕೆಲವರೂ, ಯಜ್ಞದಾನ ತಪಸ್ಸು ಮುಂತಾದುವುಗಳನ್ನು ಬಿಡತಕ್ಕದ್ದಲ್ಲವೆಂದು ಇನ್ನು ಕೆಲವರೂ ಹೇಳುವರು. ನಾನು ಇದರಲ್ಲಿರುವ ನಿಜವಾದ ತಥ್ಯವನ್ನು ತಿಳಿಸುವೆನು ಕೇಳು. 
ಯಾವುದೇ ರೀತಿಯ ಕೆಲಸವನ್ನು ಬಿಡತಕ್ಕದ್ದಲ್ಲ, ಮಾಡಿ ಮುಗಿಸತಕ್ಕದ್ದು. ಆದರೆ ಅದರ ಫಲಾಪೇಕ್ಷೆಯನ್ನು ಭಗವಂತನಲ್ಲಿ ಸಮರ್ಪಿಸಿ ಮಾಡಬೇಕು. ಹೀಗೆಂದರೆ ಕರ್ತವ್ಯವಿಮುಖನಾಗಬೇಕು ಎಂದಲ್ಲ. ಕರ್ಮಫಲಕ್ಕೆ ನಮ್ಮ ಮನಸ್ಸು ಅಂಟಿಕೊಂಡಿರಬಾರದು ಅಷ್ಟೆ. ಹಾಗೆ ಅಂಟಿಕೊಂಡಿಲ್ಲದ ಕರ್ಮಿಯ `ನಾನು' ಎಂಬ ಭಾವವಿಲ್ಲದೆ ಸ್ಥಿರವಾಗಿದ್ದು ಕರ್ಮೋತ್ಸಾಹಿಯಾಗಿರುವನು; ಯಶಸ್ಸು ಅಪಯಶಸ್ಸುಗಳಿಂದ ವಿಚಲಿತನಾಗುವುದಿಲ್ಲ. ಎಲ್ಲಿಯೂ ಲಿಪ್ತವಾಗದ ಮನಸ್ಸುಳ್ಳಂಥ ಆತ್ಮನಿಗ್ರಹಿಯಾದವನೇ ಭಗವಂತನೊಡನೆ ಒಂದಾಗಲು ಯೋಗ್ಯನು.  
        ಸ್ಪಷ್ಟವಾದ ದೃಷ್ಟಿಯುಳ್ಳವನಾಗಿ, ಆತ್ಮನಿಗ್ರಹಿಯಾಗಿ, ಇಂದ್ರಿಯವಿಷಯಗಳಿಂದ ವಿಮುಖನಾಗಿ, ಇಷ್ಟಾನಿಷ್ಟಗಳಿಂದ ದೂರವಾಗಿ, ಏಕಾಂತದಲ್ಲಿರುತ್ತ, ಮಾತನ್ನೂ ಮನಸ್ಸನ್ನೂ ದೇಹವನ್ನೂ ಹದ್ದಿನಲ್ಲಿರಿಸಿಕೊಂಡು, ಯಾವಾಗಲೂ ಧ್ಯಾನನಿರತನಾಗಿ, ಮೋಹದಿಂದ ಮುಕ್ತನಾಗಿ, ತಿರಸ್ಕಾರ ಹಿಂಸೆ ಅಹಂಕಾರ ಅತ್ಯಾಶೆ ಕ್ರೋಧ ಲೋಭಗಳನ್ನು ಬಿಟ್ಟು, ಶಾಂತಮನಸ್ಕನಾಗಿರುವ ಯೋಗಿಯು ಭಗವಂತನೊಂದಿಗೆ ಒಂದಾಗಲು ಯೋಗ್ಯನು. ಹಾಗೆ ಭಗವಂತನಲ್ಲಿ ಐಕ್ಯಹೊಂದಿ ಶಾಂತಚೇತನನಾದವನು ಆಶಿಸುವುದೂ ಇಲ್ಲ, ದುಃಖಿಸುವುದೂ ಇಲ್ಲ. ಸರ್ವಭೂತಗಳನ್ನೂ ಸಮನಾಗಿ ಭಾವಿಸುತ್ತ ನನ್ನ ಭಕ್ತನಾಗಿರುವನು. ಯಾವಾಗಲೂ ಕರ್ಮನಿರತನಾಗಿದ್ದರೂ, ನನ್ನಲ್ಲಿಯೇ ಆಶ್ರಯಹೊಂದಿ ಕೊನೆಗೆ ನನ್ನ ಕೃಪೆಯಿಂದ ಅವಿನಾಶಿಯೂ ಅನಂತನೂ ಆದ ನನ್ನನ್ನೇ ಸೇರುವನು.  
       ನೀನು ನಿನ್ನ ಮನಸ್ಸನ್ನು ನನ್ನ ಮೇಲೇ ಸ್ಥಿರವಾಗಿಡು. ನನ್ನನ್ನೇ ನೆಚ್ಚಿಕೋ. ಎಲ್ಲವನ್ನೂ ನನಗೇ ಸಮರ್ಪಿಸು. ನನ್ನನ್ನೇ ನಮಸ್ಕರಿಸು. ಕೊನೆಗೆ ನನ್ನನ್ನೇ ಸೇರುತ್ತೀಯೆ. ನನಗೆ ಪ್ರಿಯನಾದ ನಿನಗೆ ಇದನ್ನು ನಾನು ಪ್ರತಿಜ್ಞೆಮಾಡಿ ಹೇಳುತ್ತೇನೆ.  
        ಸಮಸ್ತ ಕರ್ತವ್ಯಗಳನ್ನೂ ನನಗೆ ಸಮರ್ಪಿಸಿ ಆಶ್ರಯಕ್ಕಾಗಿ ನನ್ನ ಬಳಿಗೆ ಬಾ. ದುಃಖಿಸಬೇಡ. ನಿನ್ನನ್ನು ಎಲ್ಲ ಪಾಪಗಳಿಂದಲೂ ನಾನು ಮುಕ್ತನಾಗಿಸುತ್ತೇನೆ. ಗುಹ್ಯಾತ್ ಗುಹ್ಯವಾದ ಈ ವಿವೇಕವನ್ನು ನಿನಗೆ ಹೇಳಿದ್ದೇನೆ. ಅದನ್ನು ಪೂರ್ಣವಾಗಿ ಪರಿಗಣಿಸು, ಚಿಂತಿಸು. ಅನಂತರ ನಿನಗೆ ಹೇಗೆ ಎನಿಸುವುದೋ ಹಾಗೆ ಮಾಡು" ಎಂದನು.  
    ಅರ್ಜುನನು ``ನನಗೆ ಕವಿದಿದ್ದ ಮೋಹವು ನಾಶವಾಯಿತು. ಸಂಶಯವೆಲ್ಲ ಪರಿಹಾರವಾಯಿತು. ಈಗ ನಾನು ನಿನ್ನ ಆಣತಿಯಂತೆ ನಡೆಯಲು ಸಿದ್ಧನಾಗಿರುವೆನು" ಎಂದನು.  ಸಂತೋಷದಿಂದ ಗಾಂಡೀವವನ್ನೆತ್ತಿಕೊಂಡ ಅರ್ಜುನನು, ಶ್ವೇತಾಶ್ವಗಳನ್ನು ಮುನ್ನಡೆಸುತ್ತಿದ್ದ ಕೃಷ್ಣನೊಡನೆ ತನ್ನ ಬಂಗಾರದ ರಥದಲ್ಲಿ ಭೀಷ್ಮನ ಬೆಳ್ಳಿಯ ರಥವಿರುವಲ್ಲಿಗೆ ಬಂದನು.

Tuesday, 9 August 2016

ಮಹಾಭಾರತಕಥಾ* ಭೀಷ್ಮಪರ್ವ-6

Suprabatham 

🕉 *ಮಹಾಭಾರತಕಥಾ* ಭೀಷ್ಮಪರ್ವ-6🕉
           ಕೃಷ್ಣನು ಅವನಿಗೆ ದಿವ್ಯದೃಷ್ಟಿಯನ್ನು ಅನುಗ್ರಹಿಸಿ ಅನಂತರ ತನ್ನ ದಿವ್ಯವಾದ ವಿಶ್ವರೂಪವನ್ನು ತೋರಿಸಿದನು. ಸಹಸ್ರಸೂರ್ಯರು ಒಟ್ಟಿಗೇ ಉದಯಿಸಿದಂತೆ ಇದ್ದ ಕೃಷ್ಣನ ವಿಶ್ವರೂಪದ ದಿವ್ಯತೆಯನ್ನು ಅರ್ಜುನನು ನೋಡಿದನು. ಅನೇಕ ಪ್ರಕಾರದ ವೈವಿಧ್ಯತೆಯನ್ನುಳ್ಳ ಜಗತ್ತೆಲ್ಲವೂ ಆ ಕೃಷ್ಣನಲ್ಲಿಯೇ ಒಂದಾಗಿ ಸೇರಿಹೋಗಿದ್ದಿತು. ತಗ್ಗಿಸಿದ ತಲೆಯುಳ್ಳವನಾಗಿ, ಭಕ್ತಿಯಿಂದ ಕೈ ಜೋಡಿಸಿಕೊಂಡು, ಅರ್ಜುನನು, ``ದೇವದೇವ! ಸಮಸ್ತ ಜೀವರಾಶಿಗಳನ್ನು ಋಷಿಗಳನ್ನು ಬ್ರಹ್ಮ ಮುಂತಾದ ದೇವತೆಗಳನ್ನು ನಿನ್ನ ಶರೀರದಲ್ಲಿ ನೊಡುತ್ತಿದ್ದೇನೆ. ಆದಿ ಮಧ್ಯ ಅಂತ್ಯ ಎಂಬುದಿಲ್ಲದ ಅನಂತರೂಪನು ನೀನು. ಅವಿನಾಶಿಯೂ ತೇಜೋರಾಶಿಯೂ ಆದ ನೀನು ಸಾಕ್ಷಾತ್ಕರಿಸಿಕೊಳ್ಳಬೇಕಾದ ಪರಮಾತ್ಮನು. ಈ ಇಡೀ ವಿಶ್ವದ ನೆಲೆಯು. ಆದಿಮೂಲನಾದ ನೀನು ನಿತ್ಯನೂತನ ಸ್ಥಾಯೀ ಪ್ರಕೃತಿಯ ರಕ್ಷಕನು. ಚಂದ್ರಸೂರ್ಯರೇ ನಿನ್ನ ಕಣ್ಣುಗಳು; ಮುಖವೇ ಈ ಇಡೀ ವಿಶ್ವವನ್ನು ಭಕ್ಷಿಸುತಿರುವ ಅಗ್ನಿಯು; ಭೂಮಿ ಸೂರ್ಯ ಅಂತರಿಕ್ಷ ಎಲ್ಲವನ್ನೂ ನೀನು ಅವರಿಸಿರುವೆ. ನಿನ್ನನ್ನು ನೋಡಿ ಲೋಕವೆಲ್ಲ ನಡುಗುತ್ತಿರುವುದು; ನಾನೂ ನಡುಗುತ್ತಿರುವೆನು. ಪರ್ವತದ ನದಿಗಳು ಸಾಗರವನ್ನು ಸೇರುವುದಕಾಗಿ ಧಾವಿಸಿ ಬರುವಂತೆ, ಧಾರ್ತರಾಷ್ಟ್ರರು, ನಮ್ಮ ಕಡೆಯ ಹಾಗೂ ಅವರ ಕಡೆಯ ವೀರರು ಎಲ್ಲರೂ ಅಗ್ನಿಮಯವಾದ ನಿನ್ನ ಬಾಯನ್ನು ಸೇರುವುದಕ್ಕೆ ಧಾವಿಸಿ ಬರುತ್ತಿರುವರು. ಬೆಂಕಿಯಲ್ಲಿ ಬಂದು ಬೀಳುವ ಪತಂಗಗಳಂತೆ ನಿನ್ನ ಬಾಯೊಳಕ್ಕೆ ಬಿದ್ದು ನಾಶವಾಗುತ್ತಿರುವರು. ನನ್ನ ಮೇಲೆ ದಯವಿಟ್ಟು ನೀನಾರೆಂಬುದನ್ನು ನನಗೆ ತಿಳಿಸಿಕೊಡು. ನನಗೆ ಭಯವನ್ನುಂಟುಮಾಡುತ್ತಿರುವ ಈ ಸರ್ವನಾಶದ ಉದ್ದೇಶವೇನು?" ಎಂದು ಕೇಳುತ್ತ ಶರಣಾಗತನಾದನು.  
        ಕೃಷ್ಣನು, ``ನಾನು ಯಾರೆಂಬುದನ್ನು ಅರಿಯೆಯಾ? ಲೋಕನಾಶಕನಾದ ಕಾಲನೇ ನಾನು. ಈ ಮಹಾವೀರರುಗಳಲ್ಲಿ ಒಬ್ಬೊಬ್ಬರೂ ನನ್ನ ಕೈಯಲ್ಲಿ ಸಾಯಲಿರುವರು. ಎದ್ದೇಳು ಅರ್ಜುನ, ಎದ್ದು ಕೀರ್ತಿಭಾಜನನಾಗು. ಭೀಷ್ಮ ದ್ರೋಣ ರಾಧೇಯ ಜಯದ್ರಥ ಮೊದಲಾದ ಇವರೆಲ್ಲ ಒಂದು ರೀತಿಯಿಂದ ಈಗಾಗಲೇ ನನ್ನಿಂದ ಸತ್ತಿರುವರು. ಈ ಕೆಲಸದಲ್ಲಿ ನೀನು ಕೇವಲ ನಿಮಿತ್ತ ಮಾತ್ರ. ಆದರೂ ಅವರನ್ನು ಕೊಲ್ಲುವ ಶಾಸ್ತ್ರ ಮಾಡಿ ಯುದ್ಧವನ್ನು ಗೆದ್ದುಕೋ!" ಎಂದನು. ಅರ್ಜುನನ ದನಿ ಗದ್ಗದವಾಯಿತು; ಪದಗಳು ಹೊರಡದಾದವು. ಅವನು ಕೈಮುಗಿದುಕೊಂಡು ``ಹೇ ದೇವದೇವ! ಅನಂತವೀರ್ಯ! ಜಗನ್ನಿವಾಸ! ಆದಿದೇವ! ಅನಂತರೂಪ! ಈ ವಿಶ್ವವೂ ಅದರಾಚಿನ ಅಸ್ತಿತ್ವವೂ ನೀನೇ. ಜ್ಞಾನವೂ ನೀನೇ ಜ್ಞೇಯವಸ್ತುವೂ ನೀನೇ. ಸರ್ವವ್ಯಾಪಿಯಾದ ನೀನೇ ಸಕಲಕ್ಕೂ ಆಶ್ರಯನು. ನಿನಗೆ ಸಮಾನರಾದವರು ಮೂರು ಲೋಕಗಳಲ್ಲಿಯೂ ಇಲ್ಲ. ನಿನಗೆ ಶರಣಾಗತನಾಗಿ ಕೃಪೆಮಾಡೆಂದು ಬೇಡುತ್ತಿದ್ದೇನೆ. ನಿನ್ನ ಹಿರಿಮೆಯನ್ನು ಅರಿಯದೆಯೆ ನಿನ್ನನ್ನು `ಕೃಷ್ಣಾ!' ಎಂದೆ, `ಮಿತ್ರಾ!' ಎಂದೆ; ನನ್ನ ಅಜ್ಞಾನವನ್ನು ಮನ್ನಿಸು. ತಂದೆಯ ಮಗನನ್ನು, ಮಿತ್ರನು ಮಿತ್ರನನ್ನು, ಪ್ರೇಮಿಯು ಪ್ರೇಮಿಯನ್ನು ಕ್ಷಮಿಸುವಂತೆ ನನ್ನನ್ನು ದಯವಿಟ್ಟು ಕ್ಷಮಿಸು. ದಯವಿಟ್ಟು ನಿನ್ನ ಮುಂಚಿನ ಸೌಮ್ಯರೂಪವನ್ನು ಧರಿಸು; ಈ ನಿನ್ನ ವಿಶ್ವರೂಪವನ್ನು ನಾನಿನ್ನು ತಾಳಿಕೊಳ್ಳಲಾರೆ!" ಎಂದು ಪ್ರಾರ್ಥಿಸಿಕೊಳ್ಳಲು, ಭಗವಂತನು ತನ್ನ ಎಂದಿನ ರೂಪವನ್ನು ತಳೆದು ಪುನಃ ಪಾರ್ಥಸಾರಥಿಯಾದ ಕೃಷ್ಣನಾದನು.  

      ಅರ್ಜುನನು, ``ನಿನ್ನ ಎಂದಿನ ರೂಪವನ್ನು ಕಂಡಮೇಲೆ, ಈಗ, ನನ್ನ ಮನಸ್ಸಿಗೆ ಶಾಂತಿ ಉಂಟಾಯಿತು." ಎನ್ನಲು ಕೃಷ್ಣನು, ``ಈ ನನ್ನ ವಿಶ್ವರೂಪವನ್ನು ನೋಡುವುದು ಸುಲಭ ಸಾಧ್ಯವಲ್ಲ. ಅದನ್ನು ಕೇವಲ ನನ್ನ ಮೇಲಣ ಅತಿಶಯವಾದ ಭಕ್ತಿಯಿರುವವರು ಮಾತ್ರ ಕಾಣಬಹುದು" ಎಂದನು.

Monday, 8 August 2016

*ಮಹಾಭಾರತಕಥಾ* ಭೀಷ್ಮಪರ್ವ-5🕉

Suprabatham 

🕉 *ಮಹಾಭಾರತಕಥಾ* ಭೀಷ್ಮಪರ್ವ-5🕉

      ನಾನು ಈ ಯೋಗವನ್ನು ವಿವಸ್ವಂತನಿಗೆ ಬೋಧಿಸಿದೆ; ಅವನು ಇದನ್ನು ಮನುವಿಗೂ, ಮನುವು ಇಕ್ಷ್ವಾಕುವಿಗೂ ಹೇಳಿದನು; ಅನಂತರ ಇದು ಪರಂಪರೆಯಿಂದ ಇಳಿದುಬಂತು. ಕಾಲಾನುಕ್ರಮದಲ್ಲಿ ಇತ್ತೀಚೆಗೆ ಮಸುಕಾಗಿ ಹೋಗಿರುವ ಈ ರಹಸ್ಯವನ್ನು ಪ್ರಿಯ ಸ್ನೇಹಿತನಾದ ನಿನಗೆ ನಾನು ಹೇಳಬೇಕೆಂದಿದ್ದೇನೆ. "  
      ಅರ್ಜುನನು ಅಚ್ಚರಿಯಿಂದ. ``ಆದರೆ ಕೃಷ್ಣ, ವಿವಸ್ವಂತನು ನೀನು ಹುಟ್ಟುವ ಯುಗ ಯುಗಗಳ ಹಿಂದೆ ಇದ್ದವನು. ನೀನು ಇದನ್ನು ಅವನಿಗೆ ಹೇಗೆ ಬೋಧಿಸಿದೆ ಎಂಬುದು ನನಗೆ ಅರ್ಥವಾಗುತಿಲ್ಲ!" ಎನ್ನಲು, ಕೃಷ್ಣನು ನಕ್ಕು, ``ನಾನೂ ನೀನೂ ಅನೇಕಾನೇಕ ಜನ್ಮಗಳನ್ನು ದಾಟಿ ಬಂದಿರುವೆವು. ನಾನು ಅವುಗಳನ್ನು ತಿಳಿದಿರುವೆನು; ಆದರೆ ನಿನಗೆ ಅದು ತಿಳಿಯದು. ನಾನು ಅನಾದಿ ಮತ್ತು ಅನಂತನು. ಪ್ರತಿಯೊಂದಕ್ಕೂ ನಾನೇ ಸರ್ವೇಶ್ವರನು. ಲೋಕದಲ್ಲಿ ಯಾವಾಗ ಧರ್ಮವು ಖಿಲವಾಗುವುದೋ, ಜನರಲ್ಲಿ ನೀತಿನಿಯಮಗಳು ಹಾದಿತಪ್ಪುವ ಅಪಾಯ ಒದಗುವುದೋ, ಆಗ ನಾನು ಅವತಾರವಾಗಿ ಪ್ರತ್ಯಕ್ಷವಾಗುವೆನು. ಯುಗಯುಗಗಳಲ್ಲು ನಾನು ದುಷ್ಟಶಿಕ್ಷಣ ಶಿಷ್ಟರಕ್ಷಣಗಳಿಗಾಗಿ ಹಾಗೂ ಧರ್ಮಸಂಸ್ಥಾಪನೆ ಮಾಡುವುದಕ್ಕಾಗಿ ಹುಟ್ಟಿ ಬರುವೆನು. ನನ್ನಲ್ಲಿರುವ ದಿವ್ಯತೆಯನ್ನು ತಿಳಿಯುವುದು ಎಲ್ಲರಿಗೂ ಸಾಧ್ಯವಿಲ್ಲ. ಅದನ್ನರಿತ ಎಲ್ಲೋ ಕೆಲವರು ಪುನರ್ಜನ್ಮವಿಲ್ಲದೆ ನನ್ನನ್ನೇ ಸೇರುವರು. ಅವರಿಗೆ ಕಾಮಕ್ರೋಧಗಳಾಗಲಿ ಭಯವಾಗಲಿ ಇರುವುದಿಲ್ಲ. ಅವರು ನನ್ನನ್ನೇ ಮೊರೆಹೊಕ್ಕು ನನ್ನಲ್ಲೇ ಐಕ್ಯರಾಗುವರು. ಅವರು ಯಾವ ರೂಪದಿಂದಲಾದರೂ ನನ್ನನ್ನು ಪೂಜಿಸಲಿ, ಯಾವ ಮಾರ್ಗದಿಂದಲಾದರೂ ನನ್ನನ್ನು ಬಳಿಸಾರಲಿ: ಎಲ್ಲ ಮಾರ್ಗಗಳೂ ನನ್ನಲ್ಲಿಯೇ ಕೊನೆಗೊಳ್ಳುವುವು; ನಾನು ಅವರನ್ನು ಹಾಗೆ ಹಾಗೆಯೇ ಸ್ವೀಕರಿಸುವೆನು.  
      ಈ ಕರ್ಮಯೋಗದ ವಿಚಾರವಾಗಿ ಇನ್ನೂ ಸ್ವಲ್ಪ ಹೇಳುವೆನು ಕೇಳು. ಮನುಷ್ಯನು ಕೈಕೊಳ್ಳುವ ಯಾವುದೇ ಕೆಲಸವು ಫಲಾಪೇಕ್ಷೆಯಿಂದ ಮುಕ್ತವಾಗಿರಬೇಕು. ಅಗ ಮಾತ್ರವೇ ಅವನು ಸುಖವಾಗಿರುವನು. ಫಲಾಪೇಕ್ಷೆಯಿಲ್ಲದೆ ಇರುವುದರಿಂದ, ನಿರಂತರವಾಗಿ ಅವನು ಕೆಲಸ ಮಾಡುತ್ತಿದ್ದರೂ, ಕೆಲಸ ಮಾಡದೇ ಇರುವವನಂತೆಯೇ ಇರಲು ಅವನಿಗೆ ಸಾಧ್ಯ. ಆತ್ಮಜ್ಞಾನವು ಎಲ್ಲ ಕರ್ಮವನ್ನೂ ಭಸ್ಮೀಭೂತವನ್ನಾಗಿಸಿ, ಮನುಷ್ಯನನ್ನು ಕರ್ಮಬಂಧನದಿಂದ ಬಿಡುಗಡೆ ಮಾಡುವುದು. ಯಾವನು ಜ್ಞಾನದಿಂದ, ನಿಸ್ವಾರ್ಥ ಕರ್ಮದಿಂದ ಪ್ರೇರಿತನಾಗಿರುವನೋ ಅವನು ಸಮಸ್ತ ಸಂಶಯಗಳಿಂದ ಮುಕ್ತನಾಗಿ ನನ್ನೊಂದಿಗೆ ಸೇರಿಹೋಗುವನು. ನೀನು ಕರ್ಮಫಲಗಳನ್ನು ನನಗೆ ಅರ್ಪಿಸಿಬಿಟ್ಟರೆ ನಿನ್ನ ಮನಸ್ಸು ಶುದ್ಧವಾಗಿ ನಿನಗೆ ಶಾಂತಿ ದೊರಕುವುದು. ಆಸೆಯಿಂದ ಪ್ರೇರಿತನಾದ ಸ್ವಾರ್ಥಿಯಉ ಕರ್ಮಫಲಕ್ಕೆ ಅಂಟಿಕೊಂಡು ಪ್ರಾಪಂಚಿಕನಾಗಿಬಿಡುವನು. ಯಾರು ಕರ್ಮವನ್ನು ವಿಧಿವತ್ತಾಗಿ ಮಾಡುತ್ತ, ಆದರೂ ಕರ್ಮಫಲದಲ್ಲಿ ಅನಾಸಕ್ತನಾಗಿರುವನೋ ಅವನೇ ಯೋಗಿ, ಅವನೇ ಸನ್ಯಾಸಿ. ತ್ಯಾಗವೆಂದರೆ ನಿಸ್ವಾರ್ಥ ಕರ್ಮ. ತ್ಯಾಗವೆಂದರೆ ಆಸೆಯನ್ನು ಬಿಡುವುದೆ ಹೊರತು ಇನ್ನೇನು ಅಲ್ಲ. ತ್ಯಾಗಯೋಗವನ್ನು ಪಡೆಯುವುದಕ್ಕೆ ಇರುವುದು ಕರ್ಮಮಾರ್ಗವೊಂದೇ. ಒಮ್ಮೆ ಮನುಷ್ಯನಿಗೆ ಅದು ಲಭ್ಯವಾದರೆ, ಮನಶ್ಶಾಂತಿ ತನ್ನಷ್ಟಕ್ಕೆ ತಾನೇ ಬರುವುದು. ``ಶಕ್ತಿಯಿಂದ ಬರುವ ಸುಖಗಳು ಕೇವಲ ನೋವಿನ ಮೂಲಗಳು. ಅವುಗಳಿಗೆ ಪ್ರಾರಂಭ ಅಂತ್ಯಗಳಿರುವುದರಿಂದ ಅವು ಚಿರಂತನವಾಗಿರಲು ಸಾಧ್ಯವಿಲ್ಲ. ವಿವೇಕಿಯಾದವನು ಅವುಗಳನ್ನು ಬಿಟ್ಟುಬಿಡಬೇಕು. ಮನುಷ್ಯನು ಯಾವಾಗ ಶೀತೋಷ್ಣ ಸುಖದುಃಖ ಮಾನಾಪಮಾನಗಳನ್ನು ಸಮನಾಗಿ ಕಾಣಬಲ್ಲನೋ ಅವನು ಚಿರಶಾಂತಿ ಪಡೆಯಬಲ್ಲ. ಮಣ್ಣು ಕಲ್ಲು ಚಿನ್ನ ಎಲ್ಲವು ಅವನಿಗೆ ಒಂದೇ ಅಗಿ ಕಾಣುವುವು. ಶತ್ರುಮಿತ್ರರಲ್ಲಿ, ಉದಾಸೀನರಲ್ಲಿ, ಪಕ್ಷಪಾತವಿಲ್ಲದವರಲ್ಲಿ, ದ್ವೇಷಿಗಳಲ್ಲಿ ಹಾಗೂ ಸಜ್ಜನರಲ್ಲಿ ಅವನು ವ್ಯತ್ಯಾಸವನ್ನೇ ಕಾಣುವುದಿಲ್ಲ. ಅಂತಹ ಮನುಷ್ಯನೇ ಉನ್ನತೋನ್ನತನು.  
     ಅರ್ಜುನ, ಗಮನವಿಟ್ಟು ಕೇಳು. ಗುಹ್ಯಾತ್ ಗುಹ್ಯವಾದ ರಹಸ್ಯವನ್ನು ನಿನಗೆ ಹೇಳುತ್ತೇನೆ. ಮಾನವ ರೂಪವನ್ನು ತಳೆದಿರುವುದರಿಂದ ಮೂರ್ಖರು ನನ್ನನ್ನು ಸರ್ವೇಶ್ವರನೆಂದು ಪರಿಗಣಿಸುವುದಿಲ್ಲ. ಏಕನೂ ವಿಶಿಷ್ಟನೂ ಆದ ನನ್ನನ್ನು ಪೂಜಿಸುವುದರಿಂದ ಮಾನವನು ನನ್ನನ್ನೇ ಎಂದರೆ ಪರಮಗತಿಯನ್ನೇ ಪಡೆಯುತ್ತಾನೆ. ಈ ವಿಶ್ವಸಮಸ್ತಕ್ಕೂ ನಾನು ಈಶ್ವರನು. ಎಲ್ಲ ಪೂಜೆ ಧ್ಯಾನಗಳ ಗಮ್ಯನು ನಾನು. ನನ್ನನ್ನು ಯಾರು ಧ್ಯಾನಿಸಿ ಪೂಜಿಸುವರೋ ಅವರು ಕೊನೆಗೆ ನನ್ನನ್ನೇ ಬಂದು ಸೇರುವರು. ನನ್ನ ಅನುಗ್ರಹವನ್ನು ಪಡೆಯುವುದು ಬಹಳ ಸುಲಭ. ಏನನ್ನು ನೀನು ತಿನ್ನುವಿಯೋ, ಏನನ್ನು ನೀನು ಮಾಡುವಿಯೋ, ಏನನ್ನು ನೀನು ಕೊಡುವೆಯೋ, ಯಾವ ಯಜ್ಞವನ್ನು ಮಾಡುವೆಯೋ ಅದನ್ನು ನನಗೆ ಅರ್ಪಿಸಿಬಿಡು. ನೀನು ಆಗ ಕರ್ಮಬಂಧದಿಂದ ಮುಕ್ತನಾಗಿ ಉಳಿಯುವೆ; ಒಳ್ಳೆಯ, ಕೆಟ್ಟ ಕರ್ಮಫಲಗಳು ನಿನ್ನನ್ನು ಆಗ ತಾಗಲಾರವು. ನನ್ನ ಬಳಿಗೆ ಬರಲು ನೀನು ಸ್ವತಂತ್ರನಾಗುವೆ" ಎಂದನು.  
     ಅಗ ಅರ್ಜುನನು, ``ಧ್ಯಾನದಿಂದ ನಿನ್ನನ್ನು ಹೇಗೆ ಅರಿತುಕೊಳ್ಳಬಹುದು ಎಂಬುದನ್ನು ತಿಳಿಸು. ನಿನ್ನ ಶಕ್ತಿ ಹಾಗೂ ವೈಭವಗಳನ್ನು ಕುರಿತೂ ತಿಳಿಯಬೇಕೆಂಬಾಸೆ ನನಗಿದೆ. ನೀನು ಎಲ್ಲಿರುವೆ? ನಿನ್ನನ್ನು ಎಲ್ಲಿ ಹುಡುಕಬೇಕು?" ಎಂದು ಕೇಳಲು, ಕೃಷ್ಣನು, ``ಪ್ರತಿಯೊಂದರ ಹೃದಯದ ಆತ್ಮನಾಗಿ ನಾನು ನೆಲೆಗೊಂಡಿರುವೆ. ಆದಿ ಮಧ್ಯ ಅಂತ ಮೂರೂ ನಾನೇ. ಆದಿತ್ಯರಲ್ಲಿ ನಾನು ವಿಷ್ಣುವು; ಜ್ಯೋತಿಗಳಲ್ಲಿ ಸೂರ್ಯನು; ಅಕಾಶಕಾಯಗಳಲ್ಲಿ ಚಂದ್ರನು; ವೇದಗಳಲ್ಲಿ ಸಾಮವು; ಇಂದ್ರಿಯಗಳಲ್ಲಿ ಮನಸ್ಸು; ಜೀವಿಗಳಲ್ಲಿ ಬುದ್ಧಿಯು; ರುದ್ರರಲ್ಲಿ ಶಂಕರನು; ಪರ್ವತಗಳಲ್ಲಿ ಮೇರುವು; ಪದಗಳಲ್ಲಿ ಓಂಕಾರವು; ಅಯುಧಗಳಲ್ಲಿ ವಜ್ರವು; ಅಳತೆಗಳಲ್ಲಿ ಕಾಲ; ಸರ್ವನಾಶಕ ಮೃತ್ಯು ಹಾಗೂ ಹುಟ್ಟಲಿರುವುಗಳ ಮೂಲ; ಜೀವಿಗಳ ಬೀಜರೂಪ; ಚರಾಚರ ವಸ್ತುಗಳಲ್ಲಿ ನನ್ನನ್ನುಳಿದು ಯಾವುದೂ ಇಲ್ಲ. ಯಾವುದು ವೈಭವದಿಂದ ಕೂಡಿದೆಯೋ ಯಾವುದು ಸುಂದರವೋ, ಯಾವುದು ಶಕ್ತಿಯುತವಾಗಿರುವುದೋ ಅದು ನನ್ನದೇ ವಿಭವದ ತುಣುಕು. ಕೇವಲ ಅಲ್ಪಾಂಶ ಮಾತ್ರದಿಂದ ನಾನು ಈ ವಿಶ್ವವನ್ನು ವ್ಯಾಪಿಸಿಕೊಂಡಿರುವೆನು" ಎಂದನು. ಅದಕ್ಕೆ ಆ ಅರ್ಜುನನು ``ನಾನು ನಿನ್ನ ದಿವ್ಯರೂಪವನ್ನು ನೋಡಲು ಬಯಸುತ್ತೇನೆ. ಹೇ ಯೋಗೀಶ್ವರನೆ, ನಾನು ಅದನ್ನು ತಡೆದುಕೊಳ್ಳಬಹುದಾದರೆ, ದಯವಿಟ್ಟು ಆ ರೂಪವನ್ನು ನನಗೆ ತೋರಿಸು" ಎಂದು ಬೇಡಿಕೊಂಡನು.

*ಮಹಾಭಾರತಕಥಾ* ಭೀಷ್ಮಪರ್ವ-4🕉

Suprabatham 

🕉 *ಮಹಾಭಾರತಕಥಾ* ಭೀಷ್ಮಪರ್ವ-4🕉

       ಅದನ್ನು ಹೇಳುವುದಕ್ಕೆ ನನಗೆ ಸಂತೊಷವೇ. ಮನಸ್ಸಿನ ಎಲ್ಲ ಇಷ್ಟಾನಿಷ್ಟಗಳನ್ನು ಬಿಟ್ಟು ಬಿಟ್ಟು ಆತನು ತಾನು ಸಂತೊಷದಿಂದಿರುವನು; ಸುಖದಿಂದ ಹಿಗ್ಗನು, ದುಃಖದಿಂದ ಕುಗ್ಗನು, ಆಸೆ, ಭಯ, ಕ್ರೊಧ ಇವುಗಳಿಗೆ ಆತನ ಮನಸ್ಸಿನಲ್ಲಿ ಸ್ಥಾನವೇ ಇಲ್ಲ. ಯಾವುದಕ್ಕೂ, ಯಾರಿಗೂ ಆತನು ಅಂಟಿಕೊಳ್ಳುವುದಿಲ್ಲ. ಒಳಿತುಕೆಡಕುಗಳೆರಡನ್ನೂ ಸಮವಾಗಿಯೇ ಸ್ವೀಕರಿಸುವನು; ಸಂತೋಷಿಸುವೂದೂ ಇಲ್ಲ, ದ್ವೇಷಿಸುವುದೂ ಇಲ್ಲ. ಆಮೆಯು ತನ್ನ ಅಂಗಾಂಗಗಳನ್ನು ಚಿಪ್ಪಿನೊಳಕ್ಕೆ ಎಳೆದುಕೊಳ್ಳುವಂತೆ, ಸ್ಥಿತಿಪ್ರಜ್ಞನು ತನ್ನ ಇಂದ್ರಿಯಗಳನ್ನು ತನ್ನೊಳಕ್ಕೆ ಸೆಳೆದುಕೊಳ್ಳಬಲ್ಲವನು. ಇಂದ್ರಿಯಗಳನ್ನು ಹಿಂತೆಗೆದುಕೊಂಡೊಡನೆ ವಿಷಯಗಳ ಬಗೆಗಿನ ಹಪಹಪಿಸುವಿಕೆ ಹೊರಟುಹೋಗುವುದು. ಅಲ್ಪ ಸ್ವಲ್ಪ ಉಳಿದಿರಬಹುದಾದ ಅವುಗಳ ಮೇಲಣ ರುಚಿಯೂ ಸಹ ಆತ್ಮನ ಸಾಕ್ಷಾತ್ಕಾರವಾದ ಮೇಲೆ ಹೊರಟುಹೋಗುವುದು.  
  ಇದನ್ನು ಸುಲಭಸಾಧ್ಯವೆಂದುಕೊಳ್ಳಬೇಡ. ಅತ್ಯಂತ ವಿವೇಕಿಯಾದವನಿಗೂ ಸಹ ಕೆಲವೊಮ್ಮೆ ಇಂದ್ರಿಯಗಳು ತಿರುಗಿಬಿದ್ದು, ಅವನ ಮನಸ್ಸು ಬಿರುಗಾಳಿಗೆ ಸಿಕ್ಕಿದ ದೋಣಿಯಂತೆ ಆಗುವುದು. ನನ್ನನ್ನು ಕುರಿತು ಧ್ಯಾನಿಸುವುದರಿಂದ ಇಂದ್ರಿಯನಿಗ್ರಹ ಸಾಧ್ಯ. ಮನಸ್ಸಿನಲ್ಲಿ ವಿಷಯಗಳಿಗೆ ಸ್ಥಾನ ಕೊಟ್ಟುಬಿಟ್ಟರೆ, ಅದು ಸರ್ವನಾಶಕ್ಕೆ ಕಾರಣವಾಗುವುದು. ಏಕೆಂದರೆ, ಮನಸ್ಸಿನಲ್ಲಿ ಕುಳಿತ ವಿಷಯವು ಆಸೆಯನ್ನುಂಟು ಮಾಡುವುದು; ಆಸೆಯಿಂದ ಕ್ರೋಧದ ಉಗಮ; ಕ್ರೋಧಗೊಂಡ ಮನಸ್ಸು ಭ್ರಮೆಗೊಳಗಾಗಿ ಸಾರಾಸಾರ ವಿವೇಚನೆಯನ್ನೇ ಕಳೆದುಕೊಳ್ಳುವುದು; ಮುಂದಿನದು ಸರ್ವನಾಶವಲ್ಲದೆ ಮತ್ತೇನು? ಅದ್ದರಿಂದ ಇಂದ್ರಿಯಗಳನ್ನು ನಿಗ್ರಹಿಸಬೇಕು. ಸಮುದ್ರವನ್ನು ನದಿಗಳು ಹೇಗೊ ಹಾಗೆ ಯಾವನ ಮನಸ್ಸನ್ನು ಆಸೆಗಳು ಪ್ರವೇಶಿಸಿದರೂ, ಏನೂ ಬಾದಲಾಗದೆ ಅಂಥವನು ಶಾಂತಿಯನ್ನೇ ಪಡೆಯುವನು. ಇದೇ ದಿವ್ಯಸ್ಥಿತಿ; ಯಾವುದನ್ನು ಪಡೆದರೆ ಅಲ್ಲಿಂದ ಚ್ಯುತಿಯಲ್ಲವೋ ಆ ಬ್ರಾಹ್ಮೀಸ್ಥಿತಿಯ ಆನಂದವೇ ಇದು" ಎಂದನು.  
      ಅಲ್ಲಿಯವರೆಗೆ ಅಸಕ್ತಿಯಿಂದ ಕೇಳುತ್ತಿದ್ದ ಅರ್ಜುನನು, ``ಕೃಷ್ಣ, ಆತ್ಮ ಅಥವಾ ಬ್ರಹ್ಮನ ಸಾಕ್ಷಾತ್ಕಾರವೆಂಬುದೇ ಅತ್ಯುನ್ನತ ಸ್ಥಿತಿ ಎನ್ನುವ ನೀನು, ಈ ಯುದ್ಧವೆಂಬ ಘೋರವನ್ನು ಮಾಡೆಂದು ನನಗೇಕೆ ಹೇಳುತ್ತಿರುವೆ" ಎಂದು ಪ್ರಶ್ನಿಸಿದನು.  
       ಅದಕ್ಕೆ  ಕೃಷ್ಣನು, ``ಆ ಸ್ಥಿತಿಯನ್ನು ಬಳಿಸಾರುವುದಕ್ಕೆ ಎರಡು ಮಾರ್ಗಗಳಿವೆ. ಒಂದು ಧ್ಯಾನದಿಂದ ದೊರಕುವ ಜ್ಞಾನ; ಇನ್ನೊಂದು ಕ್ರಿಯಾಶೀಲರಿಗಾಗಿ ಇರುವ ಕರ್ಮ. ನೆನಪಿಡು, ಯಾವನೂ ಕ್ಷಣಮಾತ್ರವಾದರೂ ಏನನ್ನು ಮಾಡದೆ ಸುಮ್ಮನಿರಲಾರ. ಪ್ರತಿಯೊಬ್ಬನೂ ಪ್ರತಿಕ್ಷಣವೂ ಏನಾದರೊಂದು ಮಾಡುತ್ತಿರಬೇಕೆಂಬುದೇ ಪ್ರಕೃತಿಯ ನಿಯಮ. ಏನನ್ನೂ ಮಾಡದೆ ಸುಮ್ಮನೆ ಕುಳಿತಿರುವವನ ಮನಸ್ಸು ಇಂದ್ರಿಯಪ್ರಪಂಚದಲ್ಲಿ ಸುತ್ತಾಡುತಿರುತ್ತದೆ. ಅಂಥವನು ಆಷಾಢಭೂತಿ. ಇನ್ನೊಂದೆಡೆ ನಾನು ಆಗಲೆ ಹೇಳಿದ ಸ್ಥಿತಿಪ್ರಜ್ಞ. ಇಂದ್ರಿಯಗಳನ್ನೂ ಮನಸ್ಸನ್ನೂ ನಿಗ್ರಹಿಸಿಕೊಂಡಿರುವ ಇವನು ಕೆಲಸ ಮಾಡುತ್ತಿದ್ದರೂ ಅದರಿಂದ ಲಿಪ್ತನಾಗುವುದಿಲ್ಲ. ಇವನು ಉಳಿದವರೆಲ್ಲರಿಗಿಂತ ತುಂಬ ಮೇಲಿರುವವನು. ನೀನು ಕರ್ತವ್ಯವನ್ನು ಮಾಡಲೇಬೇಕು. ಕರ್ಮವಿಮುಖನಾಗಿ ನೀನು ಬದುಕಲಾರೆ. ದೇಹವನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳಲು ಸಹ ಮನುಷ್ಯನು ಕೆಲಸ ಮಾಡಬೇಕಾಗುತ್ತದೆ. ಎಂದ ಮೇಲೆ, ಕರ್ಮಬಂಧನವನ್ನು ತಪ್ಪಿಸಿಕೊಳ್ಳುವುದು ಹೇಗೆ ಕರ್ಮವನ್ನು ಒಂದು ಯಜ್ಞಎಂಬಂತೆ ಮಾಡುವ ಮೂಲಕ. ಮಾಡುತ್ತಿರುವ ಕೆಲಸಕ್ಕೆ ಸ್ವಲ್ಪವೂ ಅಂಟಿಕೊಳ್ಳದೆ, ಲೋಕಹಿತಕ್ಕಾಗಿ ಮಾಡುತ್ತಿರುವ ಯಜ್ಞವಿದು ಎಂಬಂತೆ ಕೆಲಸಮಾಡು. ಅದೇ ಒಳ್ಳೆಯದಾಗಿ ಮಾಡಿದ ಕರ್ಮದ ರಹಸ್ಯ. ನಿನ್ನ ಕೆಲಸದಿಂದ ಇತರರಿಗೆ ಅನುಕೂಲವಾಗಬೇಕೇ ಹೊರತು ನಿನಗಲ್ಲ. ಸಮಸ್ತ ಕರ್ಮವನ್ನು ನನಗೆ ಸಮರ್ಪಿಸಿ, ಅನಂತರ ಯುದ್ಧಮಾಡು. ಪರಮಾತ್ಮನಲ್ಲಿ ಮನಸ್ಸನ್ನು ಸ್ಥಿತಗೊಳಿಸು. ಸ್ವಾರ್ಥದಾಸೆಯು ಲವಲೇಶವೂ ಇಲ್ಲದಂತೆ ಮನಸ್ಸನ್ನು ಹಿಂತೆಗೆದುಕೊ. ಹಾಗೆ ನೀನು ಕರ್ತವ್ಯವನ್ನು ನಿರ್ವಹಿಸಿದರೆ, ಅದರ ಪಾಪಪುಣ್ಯಗಳು ನಿನಗೆ ಅಂಟುವುದಿಲ್ಲವಾದ್ದರಿಂದ, ನೀನು ಮುಕ್ತನಾಗಿಯೆ ಉಳಿಯುವೆ" ಎಂದನು.  
         ಅರ್ಜುನನು, ``ನೀನು ಹೇಳುವುದು ನನಗೆ ಅರ್ಥವಾಗುತ್ತದೆ. ಆದರೆ ಕೃಷ್ಣ, ತನ್ನೆಲ್ಲ ಪ್ರಯತ್ನಗಳನ್ನು ಮೀರಿಯೂ ಮನುಷ್ಯನು ಕೆಲವೊಮ್ಮೆ ಪಾಪದೆಡೆಗೆ ದೂಡಲ್ಪಡುತ್ತಾನೆ. ತನ್ನ ಪ್ರಕೃತಿಗೆ ವಿರೋಧವಾಗಿ, ತನಗಿಷ್ಟವಿಲ್ಲದಿದ್ದರೂ ಅವನು ಪಾಪ ಮಾಡಬೇಕಾಗಿ ಬರುತ್ತದೆ. ಇಂಥದು ಸಂಭವಿಸುವುದಾದರೂ ಹೇಗೆ?" ಎಂದು ಪ್ರಶ್ನೆ ಮಾಡಿದನು.  
       ಕೃಷ್ಣನು, ``ತಿಳಿಯಿತು ಬಿಡು. ಆಸೆಯೇ ಮನುಷ್ಯನನ್ನು ಪಾಪದೆಡೆಗೆ ಕರೆದೊಯ್ಯುವುದು. ಕ್ರೋಧವೇ ಮನುಷ್ಯನನ್ನು ಪಾಪ ಮಾಡುವಂತೆ ಪ್ರೇರೇಪಿಸುವುದು. ಇವೆರಡನ್ನೂ ಮನುಷ್ಯನ ಶತ್ರುಗಳೆಂದೇ ತಿಳಿ. ಒಳಗೆ ಹುದುಗಿರುವ ನಿಜವಾದ ಜ್ಞಾವನ್ನು ಇವೆರಡೂ ಮುಸುಕಿರುವುವು. ಜ್ವಾಲೆಯನ್ನು ಹೊಗೆಯು ಮುಸುಕಿರುವಂತೆ, ಕನ್ನಡಿಯನ್ನು ಧೂಳು ಮುಸುಕಿರುವಂತೆ, ಇನ್ನೂ ಹುಟ್ಟದಿರುವ ಮಗುವನ್ನು ಗರ್ಭವು ಆವರಿಸಿರುವಂತೆ, ನಿನ್ನೊಳಗಿರುವ ಆತ್ಮನನ್ನು ನೀನು ನೊಡಲಾಗದಿರುವುದು ಇವುಗಳಿಂದಾಗಿಯೇ. ಊದುವುದರಿಂದ ಜ್ವಾಲೆಯ ಹೊಗೆಯನ್ನು ನಿವಾರಿಸುವಂತೆ, ಸಾತ್ತ್ವಿಕನಾದ ಮನುಷ್ಯನಿಗೆ ಸ್ವಲ್ಪ ಪ್ರಯತ್ನದಿಂದಲೇ ತನ್ನಲ್ಲಿರುವ ಭಗವಂತನನ್ನು ನೋಡಲು ಸಾಧ್ಯವಾಗುವುದು. ಬಟ್ಟೆಯಿಂದ ಕನ್ನಡಿಯನ್ನು ಒರೆಸಿ ಸ್ವಚ್ಛಗೊಳಿಸಬೇಕಾಗಿರುವಂತೆ, ರಾಜಸಿಕ ವ್ಯಕ್ತಿಗೆ ಸ್ವಲ್ಪ ಹೆಚ್ಚಿನ ಪ್ರಯತ್ನದಿಂದ ಭಗವತ್ಕಾಕ್ಷಾರವಾಗಬಹುದು. ಮಗುವು ಗರ್ಭಾವರಣವನ್ನು ಬಿಟ್ಟು ಹೊರಗೆ ಬರಲು ತಿಂಗಳುಗಳೇ ಬೇಕಾಗುವಂತೆ, ತಾಮಸಿಕ ವ್ಯಕ್ತಿಗೆ ಇಂದ್ರಿಯಗಳ ಹಿಡಿತದಿಂದ ತಪ್ಪಿಸಿಕೊಂಡು ಬ್ರಹ್ಮಸಾಕ್ಷಾತ್ಕಾರ ಮಾಡಿಕೊಳುವುದಕ್ಕೆ ತುಂಬ ಕಷ್ಟವಾಗುವುದು!" ಎಂದನು.  
        ಅನಂತರ ಕೃಷ್ಣನು ತನ್ನ ದಿವ್ಯತೆಯ ಕಲ್ಪನೆಯನ್ನು ಅರ್ಜುನನಿಗೆ ಮಾಡಿಕೊಡಬೇಕೆಂದು ನಿರ್ಧರಿಸಿ , ಉದ್ದೇಶಪೂರ್ವಕವಾಗಿ ಹೀಗೆಂದನು: `

*ಮಹಾಭಾರತಕಥಾ* ಭೀಷ್ಮಪರ್ವ-3

Suprabatham 

🕉 *ಮಹಾಭಾರತಕಥಾ* ಭೀಷ್ಮಪರ್ವ-3🕉

          ಕೃಷ್ಣನು ಮುಗುಳ್ನಕ್ಕು, ``ಅರ್ಜುನ, ನೀನು ಯಾರನ್ನು ಕುರಿತು ಶೋಕಿಸಬಾರದೋ ಅವರಿಗಾಗಿ ದುಃಖಪಡುತ್ತಿದ್ದಿಯೆ; ಆದರೂ ತಿಳಿದವನಂತೆ ಮಾತನಾಡುತಿದ್ದೀಯೆ. ವಿವೇಕಿಯಾದವನು ಸತ್ತವರಿಗಾಗಿಯಾಗಲಿ, ಬದುಕಿರುವವರಿಗಾಗಲಿ ಎಂದು ಅಳುವುದಿಲ್ಲ.  

``ನಿತ್ಯವಾದ ಈ ಆತ್ಮನಿಗೆ ನಾಶವೆಂಬುದಿಲ್ಲ. ಯಾರೂ ಈ ಆತ್ಮನನ್ನು ತಿಳಿಯಲಾರರು. ದೇಹಗಳು ಮಾತ್ರವೇ ಅನಿತ್ಯವಾದವುಗಳು-ಮನುಷ್ಯನು ಬಾಲ್ಯ, ಯೌವನ, ಮುಪ್ಪುಗಳೆಂಬ ಅವಸ್ಥೆಗಳನ್ನು ಪಡೆಯುವನಲ್ಲವೆ? ಇವು ಹೇಗೆ ಸಹಜವೋ ಹಾಗೆಯೇ ನಾಲ್ಕನೆಯ ಅವಸ್ಥೆಯಾದ ಮೃತ್ಯುವೆಂಬುದೂ ಸಹಜ. ಮೃತ್ಯುವು ಆತ್ಮನನ್ನು ಒಂದು ದೇಹದಿಂದ ಮತ್ತೊಂದಕ್ಕೆ ಹೋಗಲು ಅನುವುಮಾಡಿಕೊಡುವುದು. ಇಂದ್ರಿಯಗಳು ವಿಷಯಗಳೊಂದಿಗೆ ಘಾತಿಸಿದಾಗ ದೇಹಕ್ಕೆ ಶೀತೋಷ್ಣಾದಿಗಳೂ ಮನಸ್ಸಿಗೆ ಸುಖದುಃಖಗಳು ಉಂಟಾಗುವುವು; ಇವು ಚಲಿಸುವ ಮೋಡಗಳಂತೆ; ದೀರ್ಘಕಾಲ ಉಳಿಯುವುದಿಲ್ಲ. ಅವನ್ನು ಸಹಿಸಿಕೊಳ್ಳಲು ನೀನು ಕಲಿಯಬೇಕು. ಅವುಗಳಿಗೆ ಅವಿಚಲಿತನಾದರೆ ನೀನು ಅಮೃತತ್ವಕ್ಕೆ ಅರ್ಹತೆಯನ್ನು ಪಡೆಯುತ್ತಿ.  

``ಈ ಮಹಾವಿಶ್ವವೆಲ್ಲವೂ ಅವಿನಾಶಿಯಾದ ಆ ಆತ್ಮನಿಂದಲೇ ವ್ಯಾಪ್ತವಾಗಿದೆ. ನೀನು ಕೊಲ್ಲುವವನೂ ಅಲ್ಲ, ಮತ್ತೊಬ್ಬನು ಕೊಲ್ಲಿಸಿಕೊಳ್ಳುವವನೂ ಅಲ್ಲ. ದೇಹವನ್ನು ಕೊಂದಾಗ ಆತ್ಮವು ಸಾಯುವುದಿಲ್ಲ. ಆತ್ಮವು ನಿತ್ಯ, ಅವಿನಾಶಿ, ಹುಟ್ಟುಸಾವುಗಳಿಲ್ಲದುದು ಎಂದಮೇಲೆ ಕೊಲ್ಲುವುದು ಹೇಗೆ? ಮನುಷ್ಯನು ಹಳೆಯದಾದ ಬಟ್ಟೆಯನ್ನು ಬಿಸುಟು ಹೊಸತನ್ನು ತೊಡುವಂತೆ, ಆತ್ಮನು ಜೀರ್ಣವಾದ ದೇಹವನ್ನು ತೊರೆದು ಇನ್ನೊಂದು ದೇಹವನ್ನು ಸೇರುತ್ತಾನೆ. ಶತ್ರುವನ್ನು ಕೊಲ್ಲುವೆ ಎಂದು ಹೇಳುವುದು ತಪ್ಪು; ಎಕೆಂದರೆ ಆತ್ಮನನ್ನು ಆಯುಧಗಳು ಘಾತಿಸಲಾರವು, ಬೆಂಕಿ ಸುಡದು, ನೀರು ಒದ್ದೆಮಾಡದು. ಆತ್ಮವು ಚಿರಂತನವಾಗಿ ಏಕರೀತಿಯಾಗಿರುವುದು. ಈ ಸತ್ಯವನ್ನೊಮ್ಮೆ ಅರಿತುಕೊಂಡೆಯಾದರೆ ನಿನಗೆ ದುಃಖಪಡುವ ಅಗತ್ಯವೇ ಇರದು.  

"ನಿನಗೆ ಪರಮಸತ್ಯವು ಗೊತ್ತಿಲ್ಲವೆಂದಿಟ್ಟುಕೊಂಡರೂ ನೀನು ದುಃಖಪಡುವ ಅಗತ್ಯವಿಲ್ಲ. ಹುಟ್ಟಿದ ಪ್ರತಿಯೊಬ್ಬನಿಗೂ ಸಾವು ಸಿದ್ಧ ಎಂಬುದು ನಿನಗೆ ಗೊತ್ತು: ಅಂತೆಯೇ ಸತ್ತ ಜೀವಕ್ಕೆ ಪುನರ್ಜನ್ಮ ಸಿದ್ಧ. ಎಂದಮೇಲೆ ದುಃಖಪಡುವುದೇಕೆ? ವಸ್ತುಗಳು ಜೀವಿಗಳು ಹೇಗೆ ಅಸ್ತಿತ್ವಕ್ಕೆ ಬರುತ್ತವೆ, ಹೇಗೆ ಇಲ್ಲವಾಗುತ್ತವೆ ಎಂಬುದೊಂದು ಚಿದಂಬರ ರಹಸ್ಯ. ನಮಗೆ ಅವುಗಳ ನಡುವಣ ಕಾಲವಷ್ಟೇ ಅನುಭವಕ್ಕೆ ಬರುವುದು. ದೇಹದಲ್ಲಿರುವ ಆತ್ಮಕ್ಕೆ ಸಾವಿಲ್ಲವೆಂದಮೇಲೆ ಕೇವಲ ದೇಹಕ್ಕೆ ಸಾವಿಗಾಗಿ ದುಃಖಸುವ ಆವಶ್ಯಕತೆ ಎಲ್ಲಿದೆ? 

``ಇದೆಲ್ಲವು ನಿನಗೆ ಅರ್ಥವಾಗುವುದಿಲ್ಲವೆಂದಾದರೂ, ನೀನು ಕ್ಷತ್ರಿಯನಾದುದರಿಂದ ಯುದ್ಧ ಮಾಡಲೇಬೇಕು. ಯುದ್ಧ ನಿನ್ನ ಕರ್ತವ್ಯ. ಋಜುಸಮರವೆನ್ನುವುದು ಕ್ಷತ್ರಿಯನೊಬ್ಬನಿಗೆ ದೊರಕಬಹುದಾದ ಉತ್ತಮೋತ್ತಮ ಅವಕಾಶ. ಆಂತಹ ಅವಕಾಶ ಸಿಕ್ಕಿರುವ ನಿನಗಾಗಿ ಸ್ವರ್ಗದ ಬಾಗಿಲುಗಳು ತೆರೆಯಲ್ಪಟ್ಟಿವೆ. ಈ ಯುದ್ಧದಿಂದ ಹಿಮ್ಮೆಟ್ಟಿದೆಯಾದರೆ, ನಿನಗೆ ಅಪಕೀರ್ತಿ ಖಂಡಿತ. ಕರ್ತವ್ಯಭ್ರಷ್ಟನಾಗುವ ಪಾಪಕ್ಕೆ ಈಡಾಗುತ್ತೀ. ನಿನ್ನ ನಾಚಿಕೆಗೆಟ್ಟ ವರ್ತನೆಯ ಬಗ್ಗೆ ಜನರು ಆಡಿಕೊಳ್ಳುವಂತಾಗುವುದು, ಇಲ್ಲಿಯವರೆಗೆ ಕೀರ್ತಿವಂತನಾಗಿರುವ ನಿನಗೆ ಸಾವಿಗಿಂತಲು ಕೆಟ್ಟದ್ದಲ್ಲವೆ? ಯುದ್ಧದಿಂದ ಹಿಮ್ಮೆಟ್ಟುವ ನಿನ್ನ ದಯಾಧೋರಣೆಯನ್ನು ಯಾರು ಅರ್ಥಮಾಡಿಕೊಳ್ಳುತ್ತಾರೆ? ನೀನು ಯುದ್ಧಕ್ಕೆ ಹೆದರಿದೆಯೆಂದೇ ತಿಳಿಯುತ್ತಾರೆ. ನಿನ್ನ ಶತ್ರುಗಳೆಲ್ಲ ನಿನ್ನನ್ನು ನೋಡಿ ನಕ್ಕು ಛೀಮಾರಿ ಹಾಕುತ್ತಾರೆ; ಅದಕ್ಕಿಂತ ನೋವಿನ ಸಂಗತಿ ಇನ್ನೇನಿದೆ? ಬದಲಿಗೆ ನೀನು ಯುದ್ಧದಲ್ಲಿ ಸತ್ತರೆ, ಸ್ವರ್ಗವನ್ನು ಪಡೆಯುತ್ತೀಯೆ; ಗೆದ್ದರೆ ಈ ಭೂಮಿಯ ಒಡೆತನ ನಿನ್ನದಾಗುತ್ತದೆ. ಮನಸ್ಸು ಗಟ್ಟಿಮಾಡಿ ಮೇಲಕ್ಕೇಳು. ನೀನು ಯುದ್ಧ ಮಾಡಲೇಬೇಕು.  

``ಪಾಪ ಅಂಟಿಕೊಳ್ಳುವುದೆಂಬ ಹೆದರಿಕೆಯೆ? ಪಾಪದಿಂದ ತಪ್ಪಿಸಿಕೊಳ್ಳುವುದು ಹೇಗೆಂದು ನಾನು ಹೇಳುತ್ತೇನೆ. ಸುಖದುಃಖಗಳನ್ನು, ಲಾಭನಷ್ಟಗಳನ್ನು, ಜಯಾಪಜಯಗಳನ್ನು ಒಂದೇ ರೀತಿ ಭಾವಿಸು. ಇವುಗಳ ಯೋಚನೆ ನಿನ್ನನ್ನು ಕಾಡದಿರಲಿ. ಯುದ್ಧಕ್ಕೆ ಸಿದ್ಧನಾಗು; ನಾನು ಹೇಳುತ್ತೇನೆ, ನಿನಗೆ ಅದರಿಂದ ಯಾವುದೇ ಪಾಪ ಬಾರದು ಎಂದು! 

`` ಈ ನೀತಿನಿಯಮದ ಬಗ್ಗೆ ಇನ್ನೂ ಹೇಳುತ್ತೇನೆ ಕೇಳು. ಇದನ್ನು ಬುದ್ಧಿಯೋಗವೆನ್ನುವರು; ಇದನ್ನು ನೀನು ಅನುಸರಿಸಿದರೆ, ಕೆಲಸಮಾಡಿ ಅದರ ಪ್ರತಿಫಲಕ್ಕಾಗಿ, ಲಾಭಕ್ಕಾಗಿ ಹಾತೊರೆಯುವ ಕರ್ಮಬಂಧನದಿಂದ ತಪ್ಪಿಸಿಕೊಳ್ಳುತ್ತೀಯೆ. ಅನುಸರಿಸಬೇಕಾದ ಕ್ರಮದಲ್ಲಿ ಸ್ವಲ್ಪ ಹೆಚ್ಚುಕಡಿಮೆಯಾದರೆ ಕೆಟ್ಟುಹೋಗುವ ಕರ್ಮಕಾಂಡದಂತಲ್ಲ ಇದು. ನಾನು ಹೇಳುತ್ತಿರುವ ಯೋಗವೇ ಬೇರೆ. ಇಲ್ಲಿ ಮಾಡುವ ಪ್ರಯತ್ನವು ವ್ಯರ್ಥವಾಗುವ ಪ್ರಶ್ನೆಯೇ ಇಲ್ಲ. ಸ್ವಲ್ಪವೇ ಪ್ರಯತ್ನಪಟ್ಟರೂ ಅದು ನಿನ್ನನ್ನು ಮಹಾಭಯದಿಂದ ಪಾರುಮಾಡುವುದು. ಅರ್ಜುನ, ಪ್ರಯತ್ನಪಟ್ಟು ಈ ಮೂರು ಗುಣಗಳ ಮಿತಿಗಳನ್ನು ದಾಟು. ದ್ವಂದ್ವಗಳಿಗೆ ಪಕ್ಕಾಗಬೇಡ. ಶುದ್ಧಿಯ ಮೇಲೆ ಮಾತ್ರ ಮನಸ್ಸಿಡು; ಯಾವುದನ್ನೂ ವಶಪಡಿಸಿಕೊಳ್ಳಲು ಬಯಸಬೇಡ. ಆತ್ಮನನ್ನು ಮಾತ್ರವೇ ಚಿಂತಿಸು; ಅದು ನಿನ್ನ ಏಕಮಾತ್ರ ಧ್ಯೇಯವಾಗಿರಲಿ.  

``ಕೆಲಸಮಾಡುತ್ತ ಹೋಗುವುದು ನಿನ್ನ ಕರ್ತವ್ಯ. ಕೆಲಸಮಾಡುವುದು ಮಾತ್ರವೇ ನಿನ್ನ ಹಕ್ಕು; ಪ್ರತಿಫಲದ ಬಗ್ಗೆ ನಿನಗೆ ಹಕ್ಕಿಲ್ಲ. ಕೆಲಸಮಾಡುತ್ತಿರುವಾಗ ಪ್ರತಿಫಲದ ಬಗ್ಗೆ ಯೋಚಿಸಲೇಬೇಡ. ಕೆಲಸಗಳ್ಳತನದ ಭ್ರಮೆಗೂ ಬೀಳಬೇಡ. ಕೆಲಸಮಾಡದೇ ಇರುವುದಕ್ಕೂ ನಿನಗೆ ಹಕ್ಕಿಲ್ಲ. ಯಾವುದಕ್ಕೂ ಅಂಟಿಕೊಳ್ಳದೆ, ಸಮಚಿತ್ತದಿಂದ ಕೆಲಸಮಾಡು. ಗೆಲುವುಸೋಲುಗಳು ಬಾಧಿಸದೇ ಇರುವ ಈ ಸಮತ್ವವನ್ನೇ `ಯೋಗ'ವೆನ್ನುವರು" ಎಂದನು.  
      ಅರ್ಜುನನು ಮಧ್ಯೆ ಬಾಯಿಹಾಕಿ, ``ಕೃಷ್ಣ, ಈ ಸಮಚಿತ್ತವುಳ್ಳವನನ್ನು, ಸ್ಥಿತಪ್ರಜ್ಞನನ್ನು ಕುರಿತು ಇನ್ನಷ್ಟು ಹೇಳು. ಬುದ್ಧಿಗೆ ಗೆದ್ದಲು ಹಿಡಿಯದ ಅಂತಹವನು ಹೇಗಿರುತ್ತಾನೆ?" ಎಂದು ಕೇಳಿದನು. ಅರ್ಜುನ ತನ್ನ ಮೂರ್ಛಾವಸ್ಥೆಯಿಂದ ಮೇಲೇಳುವ ಲಕ್ಷಣಗಳನ್ನು ತೋರಿಸುತ್ತಿರುವನೆಂದು ಕೃಷ್ಣನಿಗೆ ಸಂತೋಷವಾಗಿರಬೇಕು. ಪುನಃ ವಿಷಯಕ್ಕೆ ಹಿಂದಿರುಗಿದ ಅವನು, ``ಅದನ್ನು ಹೇಳುವುದಕ್ಕೆ ನನಗೆ ಸಂತೊಷವೇ............

*ಮಹಾಭಾರತಕಥಾ* ಭೀಷ್ಮಪರ್ವ-2

Suprabatham 

🕉 *ಮಹಾಭಾರತಕಥಾ* ಭೀಷ್ಮಪರ್ವ-2 🕉
       ದುರ್ಯೋಧನನು ಪಾಂಡವರ ಕಡೆಯ ವ್ಯೂಹರಚನೆಯನ್ನು ನೋಡಿ ದ್ರೋಣನಲ್ಲಿಗೆ ಹೋಗಿ, ``ಆಚಾರ್ಯ, ಪಾಂಡವರ ಈ ಮಹಾಸೈನ್ಯವನ್ನು ನೋಡಿದೆಯಾ! ನಿನ್ನ ಶಿಷ್ಯ ಧೃಷ್ಟದುಮ್ನ ಎಂಥ ಅಧ್ಭುತ ವ್ಯೂಹ ರಚಿಸಿದ್ದಾನೆ! ಭೀಮಾರ್ಜುನರಲ್ಲದೆ ಇತರ ಮಹಾವೀರರೂ ಅಲ್ಲಿ ಕಾಣಿಸುತ್ತಿದ್ದಾರೆ. ಸಾತ್ಯಕಿ, ಅವನ ಹಿಂದೆ ವಿರಾಟ ದ್ರುಪದರೊಂದು ಕಡೆ. ಧೃಷ್ಟಕೇತು, ಚೇಕಿತಾನ, ಕಾಶಿರಾಜ, ಅವರ ಹಿಂದೆ ಪುರುಜಿತ್, ಕುಂತಿಭೋಜ, ಶೈಬ್ಯ ಇನ್ನೊಂದು ಕಡೆ. ದ್ರುಪದನ ಮಕ್ಕಳಾದ ಯುಧಾಮನ್ಯು ಉತ್ತಮೌಜಸ್ಸು ಅರ್ಜುನನ ರಥದ ಪಕ್ಕದಲ್ಲೇ ಇದ್ದಾರೆ. ಅಭಿಮನ್ಯು ದ್ರೌಪದಿಯ ಮಕ್ಕಳೊಟ್ಟಿಗೆ ಇದ್ದಾನೆ. ಇವರೆಲ್ಲರೂ ಮಹಾರಥಿಕರು.  
          ಇನ್ನು ನಮ್ಮ ಕಡೆ ಇರುವ ವೀರರು: ಕುರುಪಿತಾಮಹನಾದ ಭೀಷ್ಮ; ರಾಧೇಯ ಮತ್ತು ಕೃಪ- ಇವನು ಯುದ್ಧದಲ್ಲಿ ಸೋಲೆಂಬುದನ್ನೇ ಅರಿಯನು. ಇನ್ನು ಅಶ್ವತ್ಥಾಮ, ವಿಕರ್ಣ, ಸೋಮದತ್ತನ ಮಗ ಭೂರಿಶ್ರವಸ್ಸು ಇವರುಗಳು ನನಗಾಗಿ ಪ್ರಾಣವನ್ನೇ ಮುಡಿಪಾಗಿಟ್ಟವರಲ್ಲಿ ಕೆಲವರು. ಭೀಷ್ಮನಿಂದ ರಕ್ಷಿತವಾದ ಈ ನನ್ನ ಸೈನ್ಯವು ಅಮಿತವಾದದ್ದು; ಭೀಮನಿಂದ ರಕ್ಷಿತವಾದ ಅವರ ಸೈನ್ಯವಾದರೋ ಮಿತವಾಗಿರುವಂತೆ ತೋರುತ್ತಿದೆ. ಆಚಾರ್ಯ, ಯುದ್ಧ ಇನ್ನೇನು ಪ್ರಾರಂಭವಾಗುತ್ತದೆ; ನೀನು ಭೀಷ್ಮನನ್ನು ರಕ್ಷಿಸಿಕೊಳ್ಳಬೇಕು. " ಎಂದನು.  

          ದೂರದಿಂದ ಇದನ್ನೆಲ್ಲ ನೋಡಿದ ಭೀಷ್ಮನು ತನ್ನ ಮೊಮ್ಮಗನಿಗೆ ಧೈರ್ಯ ತುಂಬುವುದಕ್ಕಾಗಿ ಸಿಂಹನಾದಮಾಡಿ ತನ್ನ ಶಂಖವನ್ನು ದೊಡ್ಡದಾಗಿ ಊದಿದನು. ಇದನ್ನನುಸರಿಸಿ ಉಳಿದ ವೀರರೂ ತಮ್ಮ ತಮ್ಮ ಶಂಖಗಳನ್ನೂದಿದರು. ಕೃಷ್ಣನು ತನ್ನ ಪಾಂಚಜನ್ಯವನ್ನೂ, ಅರ್ಜುನನು ದೇವದತ್ತವನ್ನೂ, ಭೀಮನು ಪೌಂಡ್ರವನ್ನೂ, ಯುಧಿಷ್ಠಿರನು ಅನಂತವಿಜಯವನ್ನೂ, ನಕುಲನು ಸುಘೋಷವನ್ನೂ, ಸಹದೇವನು ಮಣಿಪುಷ್ಪಕವನ್ನೂ ಒಬ್ಬರಾದ ಮೇಲೊಬ್ಬರಂತೆ ಊದಿದರು. ಅನಂತರ ಕಾಶೀರಾಜ, ಶಿಖಂಡಿ, ಸಾತ್ಯಕಿ, ಧೃಷ್ಟದ್ಯುಮ್ನ, ವಿರಾಟ, ದ್ರುಪದ, ದ್ರೌಪದಿಯ ಮಕ್ಕಳು, ಅಭಿಮನ್ಯು ಎಲ್ಲರೂ ಅವರವರ ಶಂಖಗಳನ್ನೂದಿ ಮಹಾಧ್ವನಿಯನ್ನು ಉಂಟುಮಾಡಿದರು.

        ಹನುಮಧ್ವಜದಿಂದ ಅಲಂಕೃತವಾದ ಅರ್ಜುನನ ರಥವು ಮುಂದೆ ಬಂದಿತು. ಅಜ್ಜ ರಚಿಸಿದ ವ್ಯೂಹ ಈಗ ಅವನ ಕಣ್ಣಿಗೆ ಬಿದ್ದಿತು. ಆ ಮಹಾವರ್ಣದಲ್ಲಿ ಅರ್ಜುನನು ತನ್ನ ಗಾಂಡೀವವನ್ನು ಕೈಗೆ ತೆಗೆದುಕೊಂಡು, ``ಕೃಷ್ಣ, ನನ್ನ ರಥವನ್ನು ಎರಡು ಸೈನ್ಯಗಳ ಮಧ್ಯೆ ನಿಲ್ಲಿಸು. ನನ್ನ ವಿರುದ್ಧ ಸೆಣೆಸಲು ನಿಂತಿರುವ ವೀರರುಗಳಾರೆಂದು ನೋಡಬಯಸುತ್ತೇನೆ. ದುರ್ಯೋಧನನ ಪ್ರೀತ್ಯರ್ಥವಾಗಿ ಬಂದಿರುವವರೆಲ್ಲರನ್ನೂ ನಾನು ಕಾಣಬಯಸುತ್ತೆನೆ" ಎಂದನು. ಅದರಂತೆ ಕೃಷ್ಣನು ಭೀಷ್ಮದ್ರೋಣಾದಿಗಳ ಮುಂದೆ ರಥವನ್ನು ನಿಲ್ಲಿಸಿ, ``ಅರ್ಜುನ, ಭೀಷ್ಮ ದ್ರೋಣರು ಮುನ್ನಡೆಸುತ್ತಿರುವ ಕೌರವಸೈನ್ಯವನ್ನು ನೋಡು. ನಿನ್ನ ಕೈಯಲ್ಲಿ ಪ್ರಾಣ ಬಿಡಲು ಬಂದಿರುವವರೆಲ್ಲರನ್ನು ನೋಡಿಬಿಡು"ಎಂದನು.  
       ಅರ್ಜುನ ಎಲ್ಲರನ್ನು ನೋಡಿದನು. ಕಣ್ಣೆವೆಯಿಕ್ಕದೆ ನೋಡಿಯೇ ನೋಡಿದನು. ಅಲ್ಲಿದ್ದ ವೀರರೆಲ್ಲರು ತನ್ನ ಪ್ರೀತಿಪಾತ್ರರೇ! ಅಜ್ಜ, ಗುರುಗಳು, ಚಿಕ್ಕಪ್ಪ ದೊಡ್ಡಪ್ಪಂದಿರು, ಮಕ್ಕಳು, ಗೆಳೆಯರು, ನೋಡನೋಡುತ್ತ ಅವನ ಅಂತಃಕರಣ ತುಂಬಿ ಬಂದಿತು. ಹೃದಯದಲ್ಲಿ ಮಹಾ ದಯೆಯುಂಟಾಯಿತು. ಗದ್ಗದ ಕಂಠದಿಂದ, ``ಕೃಷ್ಣ, ನನ್ನ ದೇಹ ದುರ್ಬಲವಾಗುತ್ತಿದೆ. ಬಾಯಿ ಒಣಗುತ್ತಿದೆ, ಇದ್ದಕ್ಕಿದಂತೆ ನಡುಕ ಬಂದಿದೆ: ತಲೆತಿರುಗಿ ಮೂರ್ಛೆಹೋಗುವಂತೆ ಆಗುತ್ತಿದೆ: ಮೊಣಕಾಲುಗಳು ನಡುಗುತ್ತಿವೆ, ಜ್ವರ ಬಂದಂತಾಗಿದೆ, ಗಾಂಡೀವವು ಕೈಯಿಂದ ಜಾರುತಿದೆ. ನಮ್ಮವರೇ ಆದ ಇವರ ಜೊತೆಗೆ ನಾನು ಯುದ್ಧಮಾಡಲಾರೆ. ಕಾಣಿಸುತ್ತಿರುವ ಕೆಟ್ಟ ಶಕುನಗಳನ್ನಾದರೂ ನೋಡು, ಕೃಷ್ಣ! ಬಂಧುಗಳ ಹತ್ಯೆಯಿಂದ ಪ್ರಯೋಜನವಿಲ್ಲ. ಈ ಯುದ್ಧವನ್ನು ಜಯಿಸುವುದರಿಂದ ಬರುವ ರಾಜ್ಯವಾಗಲಿ ಸುಖಗಳಾಗಲಿ ನನಗೆ ಬೇಡ. ಈ ಮಹಾವೀರರುಗಳ ಮೇಲೆ ನನಗೆ ಅತಿಶಯವಾದ ಪ್ರೀತಿಯಿದೆ: ಮೂರು ಲೋಕಗಳ ಸ್ವಾಮ್ಯವನ್ನೇ ಕೊಟ್ಟರೂ ನಾನವರನ್ನು ಕೊಲ್ಲಲಾರೆ. ಕೇವಲ ರಾಜ್ಯಲಾಭಕ್ಕಾಗಿ ಧಾರ್ತರಾಷ್ಟ್ರರನ್ನು ಕೊಲ್ಲಲೆ? ಅವರು ಕೆಟ್ಟವರು, ಲೋಭಿಗಳು, ಕಳ್ಳರು, ಎಲ್ಲಾ ಸರಿ. ಆದರೆ ಅವರು ನನ್ನ ಸೋದರರು: ಅವರನ್ನು ಕೊಲ್ಲುವುದು ಪಾಪ. ನಾನು ಯುದ್ಧದಿಂದ ಹಿಂದಿರುಗುತ್ತೇನೆ; ದುರ್ಯೋಧನನೇ ಬೇಕಾದರೆ ನನ್ನನ್ನು ಕೊಲ್ಲಲಿ; ನನಗಂತೂ ಯುದ್ಧ ಬೇಡವೇ ಬೇಡ" ಎಂದವನೇ ಅರ್ಜುನನು ಬಿಲ್ಲುಬಾಣಗಳನ್ನೆಸೆದು ರಥದಲ್ಲಿ ಕುಸಿದು ಕುಳಿತುಬಿಟ್ಟನು. ಅವನ ಹೃದಯವು ಭಾರವಾಯಿತು;ಕಣ್ಣೀರು ತುಂಬಿತು; ಮನಸ್ಸು ದಯೆಯಿಂದ ತುಂಬಿಹೋಯಿತು.  

      ಕ್ಷಣಕಾಲ ಅವನನ್ನು ನೋಡಿದ ಕೃಷ್ಣನು ``ಅರ್ಜುನ, ಇಂತಹ ವಿಷಮ ಸಮಯದಲ್ಲಿ ಆರ್ಯ ಯೋಗ್ಯವಲ್ಲದ, ಕೀರ್ತಿನಾಶಕವಾದ ಈ ಮೋಹವೆ? ಷಂಡನಂತೆ ವರ್ತಿಸಬೇಡ; ತುಚ್ಛವಾದ ಈ ಹೃದಯದೌರ್ಬಲ್ಯವನ್ನು ಬಿಟ್ಟು ಮೇಲೇಳು" ಎಂದನು. ಆದರು ಅರ್ಜುನನ ವಿಷಣ್ಣತೆ ತೊಲಗಲಿಲ್ಲ. ಕೃಷ್ಣ, ಪೂಜಾರ್ಹರಾದ ಭೀಷ್ಮದ್ರೋಣರ ಮೇಲೆ ನಾನು ಹೇಗೆ ಬಾಣಪ್ರಯೋಗಮಾಡಲಿ? ಅವರನ್ನು ಕೊಂದು ರಕ್ತಸಿಕ್ತವಾದ ಭೋಗವನ್ನುಣ್ಣುವುದಕ್ಕಿಂತ ಭಿಕ್ಷಾನ್ನವನ್ನುಂಡು ಬದುಕುವುದು ಒಳ್ಳೆಯದು. ಯುದ್ಧದಲ್ಲಿ ಯಾರಿಗೆ ಜಯವೋ ಯಾರಿಗೆ ಗೊತ್ತು? ಯಾರನ್ನು ಕೊಲ್ಲಲು ನನಗಿಷ್ಟವಿಲ್ಲವೋ ಆ ಕೌರವರೇ ನನ್ನೆದುರು ನಿಂತಿದ್ದಾರೆ. ನಾನೇನೂ ಹೇಡಿಯಲ್ಲವೆಂದು ನಿನಗೆ ಗೊತ್ತು. ಇದು ದೌರ್ಬಲ್ಯವಲ್ಲ, ದಯೆ. ನನಗೇನು ಮಾಡಬೇಕೆಂಬುದೇ ತೋಚುತ್ತಿಲ್ಲ. ಕೃಷ್ಣ, ಯಾವುದು ನನಗೆ ಶ್ರೇಯಸ್ಕರವೋ ನೀನೇ ಹೇಳು, ನೀನು ಹೇಳಿದಂತೆ ಮಾಡುತ್ತೇನೆ" ಎಂದವನೇ ಅರ್ಜುನನು ಸುಮ್ಮನೆ ಕುಳಿತುಬಿಟ್ಟನು.

Introduction

This blog is dedicated to the elaboration of the Indian Epic, Bharatam, in Kannada, a South Indian language. The first few posts will focus on Geetopadesham. After Geetodesham, I will try and get the other episodes of Bharatam from the beginning.

Disclaimer: I am merely a medium helping to get these posts on the blog. Am not the author.

I will share more details on the author and the great purpose with which (s)he started this exercise of translating Bharatam in Kannada and sharing it with the near and dear. The author of these posts sends one write-up everyday, covering the Epic with a brief, yet effective explanation.
You can consume these daily updates like an everyday capsule that keeps the inner being at peace.

Namaskaram.