Monday, 8 August 2016

*ಮಹಾಭಾರತಕಥಾ* ಭೀಷ್ಮಪರ್ವ-3

Suprabatham 

🕉 *ಮಹಾಭಾರತಕಥಾ* ಭೀಷ್ಮಪರ್ವ-3🕉

          ಕೃಷ್ಣನು ಮುಗುಳ್ನಕ್ಕು, ``ಅರ್ಜುನ, ನೀನು ಯಾರನ್ನು ಕುರಿತು ಶೋಕಿಸಬಾರದೋ ಅವರಿಗಾಗಿ ದುಃಖಪಡುತ್ತಿದ್ದಿಯೆ; ಆದರೂ ತಿಳಿದವನಂತೆ ಮಾತನಾಡುತಿದ್ದೀಯೆ. ವಿವೇಕಿಯಾದವನು ಸತ್ತವರಿಗಾಗಿಯಾಗಲಿ, ಬದುಕಿರುವವರಿಗಾಗಲಿ ಎಂದು ಅಳುವುದಿಲ್ಲ.  

``ನಿತ್ಯವಾದ ಈ ಆತ್ಮನಿಗೆ ನಾಶವೆಂಬುದಿಲ್ಲ. ಯಾರೂ ಈ ಆತ್ಮನನ್ನು ತಿಳಿಯಲಾರರು. ದೇಹಗಳು ಮಾತ್ರವೇ ಅನಿತ್ಯವಾದವುಗಳು-ಮನುಷ್ಯನು ಬಾಲ್ಯ, ಯೌವನ, ಮುಪ್ಪುಗಳೆಂಬ ಅವಸ್ಥೆಗಳನ್ನು ಪಡೆಯುವನಲ್ಲವೆ? ಇವು ಹೇಗೆ ಸಹಜವೋ ಹಾಗೆಯೇ ನಾಲ್ಕನೆಯ ಅವಸ್ಥೆಯಾದ ಮೃತ್ಯುವೆಂಬುದೂ ಸಹಜ. ಮೃತ್ಯುವು ಆತ್ಮನನ್ನು ಒಂದು ದೇಹದಿಂದ ಮತ್ತೊಂದಕ್ಕೆ ಹೋಗಲು ಅನುವುಮಾಡಿಕೊಡುವುದು. ಇಂದ್ರಿಯಗಳು ವಿಷಯಗಳೊಂದಿಗೆ ಘಾತಿಸಿದಾಗ ದೇಹಕ್ಕೆ ಶೀತೋಷ್ಣಾದಿಗಳೂ ಮನಸ್ಸಿಗೆ ಸುಖದುಃಖಗಳು ಉಂಟಾಗುವುವು; ಇವು ಚಲಿಸುವ ಮೋಡಗಳಂತೆ; ದೀರ್ಘಕಾಲ ಉಳಿಯುವುದಿಲ್ಲ. ಅವನ್ನು ಸಹಿಸಿಕೊಳ್ಳಲು ನೀನು ಕಲಿಯಬೇಕು. ಅವುಗಳಿಗೆ ಅವಿಚಲಿತನಾದರೆ ನೀನು ಅಮೃತತ್ವಕ್ಕೆ ಅರ್ಹತೆಯನ್ನು ಪಡೆಯುತ್ತಿ.  

``ಈ ಮಹಾವಿಶ್ವವೆಲ್ಲವೂ ಅವಿನಾಶಿಯಾದ ಆ ಆತ್ಮನಿಂದಲೇ ವ್ಯಾಪ್ತವಾಗಿದೆ. ನೀನು ಕೊಲ್ಲುವವನೂ ಅಲ್ಲ, ಮತ್ತೊಬ್ಬನು ಕೊಲ್ಲಿಸಿಕೊಳ್ಳುವವನೂ ಅಲ್ಲ. ದೇಹವನ್ನು ಕೊಂದಾಗ ಆತ್ಮವು ಸಾಯುವುದಿಲ್ಲ. ಆತ್ಮವು ನಿತ್ಯ, ಅವಿನಾಶಿ, ಹುಟ್ಟುಸಾವುಗಳಿಲ್ಲದುದು ಎಂದಮೇಲೆ ಕೊಲ್ಲುವುದು ಹೇಗೆ? ಮನುಷ್ಯನು ಹಳೆಯದಾದ ಬಟ್ಟೆಯನ್ನು ಬಿಸುಟು ಹೊಸತನ್ನು ತೊಡುವಂತೆ, ಆತ್ಮನು ಜೀರ್ಣವಾದ ದೇಹವನ್ನು ತೊರೆದು ಇನ್ನೊಂದು ದೇಹವನ್ನು ಸೇರುತ್ತಾನೆ. ಶತ್ರುವನ್ನು ಕೊಲ್ಲುವೆ ಎಂದು ಹೇಳುವುದು ತಪ್ಪು; ಎಕೆಂದರೆ ಆತ್ಮನನ್ನು ಆಯುಧಗಳು ಘಾತಿಸಲಾರವು, ಬೆಂಕಿ ಸುಡದು, ನೀರು ಒದ್ದೆಮಾಡದು. ಆತ್ಮವು ಚಿರಂತನವಾಗಿ ಏಕರೀತಿಯಾಗಿರುವುದು. ಈ ಸತ್ಯವನ್ನೊಮ್ಮೆ ಅರಿತುಕೊಂಡೆಯಾದರೆ ನಿನಗೆ ದುಃಖಪಡುವ ಅಗತ್ಯವೇ ಇರದು.  

"ನಿನಗೆ ಪರಮಸತ್ಯವು ಗೊತ್ತಿಲ್ಲವೆಂದಿಟ್ಟುಕೊಂಡರೂ ನೀನು ದುಃಖಪಡುವ ಅಗತ್ಯವಿಲ್ಲ. ಹುಟ್ಟಿದ ಪ್ರತಿಯೊಬ್ಬನಿಗೂ ಸಾವು ಸಿದ್ಧ ಎಂಬುದು ನಿನಗೆ ಗೊತ್ತು: ಅಂತೆಯೇ ಸತ್ತ ಜೀವಕ್ಕೆ ಪುನರ್ಜನ್ಮ ಸಿದ್ಧ. ಎಂದಮೇಲೆ ದುಃಖಪಡುವುದೇಕೆ? ವಸ್ತುಗಳು ಜೀವಿಗಳು ಹೇಗೆ ಅಸ್ತಿತ್ವಕ್ಕೆ ಬರುತ್ತವೆ, ಹೇಗೆ ಇಲ್ಲವಾಗುತ್ತವೆ ಎಂಬುದೊಂದು ಚಿದಂಬರ ರಹಸ್ಯ. ನಮಗೆ ಅವುಗಳ ನಡುವಣ ಕಾಲವಷ್ಟೇ ಅನುಭವಕ್ಕೆ ಬರುವುದು. ದೇಹದಲ್ಲಿರುವ ಆತ್ಮಕ್ಕೆ ಸಾವಿಲ್ಲವೆಂದಮೇಲೆ ಕೇವಲ ದೇಹಕ್ಕೆ ಸಾವಿಗಾಗಿ ದುಃಖಸುವ ಆವಶ್ಯಕತೆ ಎಲ್ಲಿದೆ? 

``ಇದೆಲ್ಲವು ನಿನಗೆ ಅರ್ಥವಾಗುವುದಿಲ್ಲವೆಂದಾದರೂ, ನೀನು ಕ್ಷತ್ರಿಯನಾದುದರಿಂದ ಯುದ್ಧ ಮಾಡಲೇಬೇಕು. ಯುದ್ಧ ನಿನ್ನ ಕರ್ತವ್ಯ. ಋಜುಸಮರವೆನ್ನುವುದು ಕ್ಷತ್ರಿಯನೊಬ್ಬನಿಗೆ ದೊರಕಬಹುದಾದ ಉತ್ತಮೋತ್ತಮ ಅವಕಾಶ. ಆಂತಹ ಅವಕಾಶ ಸಿಕ್ಕಿರುವ ನಿನಗಾಗಿ ಸ್ವರ್ಗದ ಬಾಗಿಲುಗಳು ತೆರೆಯಲ್ಪಟ್ಟಿವೆ. ಈ ಯುದ್ಧದಿಂದ ಹಿಮ್ಮೆಟ್ಟಿದೆಯಾದರೆ, ನಿನಗೆ ಅಪಕೀರ್ತಿ ಖಂಡಿತ. ಕರ್ತವ್ಯಭ್ರಷ್ಟನಾಗುವ ಪಾಪಕ್ಕೆ ಈಡಾಗುತ್ತೀ. ನಿನ್ನ ನಾಚಿಕೆಗೆಟ್ಟ ವರ್ತನೆಯ ಬಗ್ಗೆ ಜನರು ಆಡಿಕೊಳ್ಳುವಂತಾಗುವುದು, ಇಲ್ಲಿಯವರೆಗೆ ಕೀರ್ತಿವಂತನಾಗಿರುವ ನಿನಗೆ ಸಾವಿಗಿಂತಲು ಕೆಟ್ಟದ್ದಲ್ಲವೆ? ಯುದ್ಧದಿಂದ ಹಿಮ್ಮೆಟ್ಟುವ ನಿನ್ನ ದಯಾಧೋರಣೆಯನ್ನು ಯಾರು ಅರ್ಥಮಾಡಿಕೊಳ್ಳುತ್ತಾರೆ? ನೀನು ಯುದ್ಧಕ್ಕೆ ಹೆದರಿದೆಯೆಂದೇ ತಿಳಿಯುತ್ತಾರೆ. ನಿನ್ನ ಶತ್ರುಗಳೆಲ್ಲ ನಿನ್ನನ್ನು ನೋಡಿ ನಕ್ಕು ಛೀಮಾರಿ ಹಾಕುತ್ತಾರೆ; ಅದಕ್ಕಿಂತ ನೋವಿನ ಸಂಗತಿ ಇನ್ನೇನಿದೆ? ಬದಲಿಗೆ ನೀನು ಯುದ್ಧದಲ್ಲಿ ಸತ್ತರೆ, ಸ್ವರ್ಗವನ್ನು ಪಡೆಯುತ್ತೀಯೆ; ಗೆದ್ದರೆ ಈ ಭೂಮಿಯ ಒಡೆತನ ನಿನ್ನದಾಗುತ್ತದೆ. ಮನಸ್ಸು ಗಟ್ಟಿಮಾಡಿ ಮೇಲಕ್ಕೇಳು. ನೀನು ಯುದ್ಧ ಮಾಡಲೇಬೇಕು.  

``ಪಾಪ ಅಂಟಿಕೊಳ್ಳುವುದೆಂಬ ಹೆದರಿಕೆಯೆ? ಪಾಪದಿಂದ ತಪ್ಪಿಸಿಕೊಳ್ಳುವುದು ಹೇಗೆಂದು ನಾನು ಹೇಳುತ್ತೇನೆ. ಸುಖದುಃಖಗಳನ್ನು, ಲಾಭನಷ್ಟಗಳನ್ನು, ಜಯಾಪಜಯಗಳನ್ನು ಒಂದೇ ರೀತಿ ಭಾವಿಸು. ಇವುಗಳ ಯೋಚನೆ ನಿನ್ನನ್ನು ಕಾಡದಿರಲಿ. ಯುದ್ಧಕ್ಕೆ ಸಿದ್ಧನಾಗು; ನಾನು ಹೇಳುತ್ತೇನೆ, ನಿನಗೆ ಅದರಿಂದ ಯಾವುದೇ ಪಾಪ ಬಾರದು ಎಂದು! 

`` ಈ ನೀತಿನಿಯಮದ ಬಗ್ಗೆ ಇನ್ನೂ ಹೇಳುತ್ತೇನೆ ಕೇಳು. ಇದನ್ನು ಬುದ್ಧಿಯೋಗವೆನ್ನುವರು; ಇದನ್ನು ನೀನು ಅನುಸರಿಸಿದರೆ, ಕೆಲಸಮಾಡಿ ಅದರ ಪ್ರತಿಫಲಕ್ಕಾಗಿ, ಲಾಭಕ್ಕಾಗಿ ಹಾತೊರೆಯುವ ಕರ್ಮಬಂಧನದಿಂದ ತಪ್ಪಿಸಿಕೊಳ್ಳುತ್ತೀಯೆ. ಅನುಸರಿಸಬೇಕಾದ ಕ್ರಮದಲ್ಲಿ ಸ್ವಲ್ಪ ಹೆಚ್ಚುಕಡಿಮೆಯಾದರೆ ಕೆಟ್ಟುಹೋಗುವ ಕರ್ಮಕಾಂಡದಂತಲ್ಲ ಇದು. ನಾನು ಹೇಳುತ್ತಿರುವ ಯೋಗವೇ ಬೇರೆ. ಇಲ್ಲಿ ಮಾಡುವ ಪ್ರಯತ್ನವು ವ್ಯರ್ಥವಾಗುವ ಪ್ರಶ್ನೆಯೇ ಇಲ್ಲ. ಸ್ವಲ್ಪವೇ ಪ್ರಯತ್ನಪಟ್ಟರೂ ಅದು ನಿನ್ನನ್ನು ಮಹಾಭಯದಿಂದ ಪಾರುಮಾಡುವುದು. ಅರ್ಜುನ, ಪ್ರಯತ್ನಪಟ್ಟು ಈ ಮೂರು ಗುಣಗಳ ಮಿತಿಗಳನ್ನು ದಾಟು. ದ್ವಂದ್ವಗಳಿಗೆ ಪಕ್ಕಾಗಬೇಡ. ಶುದ್ಧಿಯ ಮೇಲೆ ಮಾತ್ರ ಮನಸ್ಸಿಡು; ಯಾವುದನ್ನೂ ವಶಪಡಿಸಿಕೊಳ್ಳಲು ಬಯಸಬೇಡ. ಆತ್ಮನನ್ನು ಮಾತ್ರವೇ ಚಿಂತಿಸು; ಅದು ನಿನ್ನ ಏಕಮಾತ್ರ ಧ್ಯೇಯವಾಗಿರಲಿ.  

``ಕೆಲಸಮಾಡುತ್ತ ಹೋಗುವುದು ನಿನ್ನ ಕರ್ತವ್ಯ. ಕೆಲಸಮಾಡುವುದು ಮಾತ್ರವೇ ನಿನ್ನ ಹಕ್ಕು; ಪ್ರತಿಫಲದ ಬಗ್ಗೆ ನಿನಗೆ ಹಕ್ಕಿಲ್ಲ. ಕೆಲಸಮಾಡುತ್ತಿರುವಾಗ ಪ್ರತಿಫಲದ ಬಗ್ಗೆ ಯೋಚಿಸಲೇಬೇಡ. ಕೆಲಸಗಳ್ಳತನದ ಭ್ರಮೆಗೂ ಬೀಳಬೇಡ. ಕೆಲಸಮಾಡದೇ ಇರುವುದಕ್ಕೂ ನಿನಗೆ ಹಕ್ಕಿಲ್ಲ. ಯಾವುದಕ್ಕೂ ಅಂಟಿಕೊಳ್ಳದೆ, ಸಮಚಿತ್ತದಿಂದ ಕೆಲಸಮಾಡು. ಗೆಲುವುಸೋಲುಗಳು ಬಾಧಿಸದೇ ಇರುವ ಈ ಸಮತ್ವವನ್ನೇ `ಯೋಗ'ವೆನ್ನುವರು" ಎಂದನು.  
      ಅರ್ಜುನನು ಮಧ್ಯೆ ಬಾಯಿಹಾಕಿ, ``ಕೃಷ್ಣ, ಈ ಸಮಚಿತ್ತವುಳ್ಳವನನ್ನು, ಸ್ಥಿತಪ್ರಜ್ಞನನ್ನು ಕುರಿತು ಇನ್ನಷ್ಟು ಹೇಳು. ಬುದ್ಧಿಗೆ ಗೆದ್ದಲು ಹಿಡಿಯದ ಅಂತಹವನು ಹೇಗಿರುತ್ತಾನೆ?" ಎಂದು ಕೇಳಿದನು. ಅರ್ಜುನ ತನ್ನ ಮೂರ್ಛಾವಸ್ಥೆಯಿಂದ ಮೇಲೇಳುವ ಲಕ್ಷಣಗಳನ್ನು ತೋರಿಸುತ್ತಿರುವನೆಂದು ಕೃಷ್ಣನಿಗೆ ಸಂತೋಷವಾಗಿರಬೇಕು. ಪುನಃ ವಿಷಯಕ್ಕೆ ಹಿಂದಿರುಗಿದ ಅವನು, ``ಅದನ್ನು ಹೇಳುವುದಕ್ಕೆ ನನಗೆ ಸಂತೊಷವೇ............

No comments:

Post a Comment